ನ್ಯೂಸ್

ಶಿಕ್ಷಕಿ ಚಲಿಸುತ್ತಿದ್ದ ಸ್ಕೂಟಿಯಲ್ಲಿತ್ತು ನಾಗಪ್ಪ !

ಶಿವಮೊಗ್ಗ: ಶಿಕ್ಷಕಿ ಎಂದಿನಂತೆ ಶಾಲೆಗೆ ತನ್ನ ಸ್ಕೂಟಿಯನ್ನು ಕೊಂಡೊಯ್ದಿದ್ದರು. ಸಂಜೆ ಮನೆಗೆ ಮರಳುವಾಗ ಮಾರ್ಗಮಧ್ಯೆ ಸ್ಕೂಟಿ ಮುಂಭಾಗದ ಡೂಮ್‌ನೊಳಗೆ ಹಾವು ಕಾಣಿಸಿಕೊಂಡರೂ ಧೈರ್ಯ ಮಾಡಿ ಐದಾರು ಕಿ.ಮೀ.ವರೆಗೆ ಚಲಾಯಿಸಿಕೊಂಡು ಬಂದಿದ್ದು ಸ್ಕೂಟಿಯಲಿದ್ದ ನಾಗರಹಾವನ್ನು ಸ್ನೇಕ್ ಕಿರಣ್ ಸೆರೆಹಿಡಿದರು.

ಶಿವಮೊಗ್ಗ ಸಹ್ಯಾದ್ರಿನಗರದ ಟಿ.ಎಸ್.ವೇದಾವತಿ ತಾಲೂಕಿನ ಪಿಳ್ಳಂಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಶಾಲೆಯಿಂದ ಮನೆಗೆ ಮರಳುವಾಗ ಸಣ್ಣ ನಾಗರಹಾವು ಸ್ಕೂಟಿ ಮುಂಭಾಗದಲ್ಲಿ ಸೇರಿಕೊಂಡಿದ್ದನ್ನು ಗಮನಿಸಿದ್ದರು. ಧೈರ್ಯ ಮಾಡಿ ಸಹ್ಯಾದ್ರಿನಗರದವರೆಗೂ ಸ್ಕೂಟಿ ಚಲಾಯಿಸಿಕೊಂಡೇ ಬಂದಿದ್ದರು.

ಸಹ್ಯಾದ್ರಿನಗರಕ್ಕೆ ಬಂದು ನಿಲ್ಲಿಸಿದ ಬಳಿಕ ಸ್ನೇಕ್ ಕಿರಣ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ತೆರಳಿದ ಕಿರಣ್ ಸ್ಕೂಟಿಯ ಮುಂಭಾಗದ ಬಿಡಿಭಾಗಗಳನ್ನು ಬಿಚ್ಚಿ ಹೆಡ್‌ಲೈಟ್‌ನ ಡೂಮ್‌ನಲ್ಲಿ ಅಡಗಿಕೊಂಡಿದ್ದ ಸಣ್ಣ ನಾಗರಹಾವನ್ನು ಸೆರೆ ಹಿಡಿದರು.

ಶಿವಮೊಗ್ಗದಿಂದ ಪಿಳ್ಳಂಗೆರೆಗೆ 10 ಕಿ.ಮೀ. ಆಗಲಿದ್ದು ಬೆಳಗ್ಗೆ ಸ್ಕೂಟಿಯಲ್ಲಿ ತೆರಳಿ ಶಾಲೆ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆಗ ಹಾವು ಸ್ಕೂಟಿಯೊಳಗೆ ಸೇರಿಕೊಂಡಿತ್ತು. ಶಿಕ್ಷಕಿ ವೇದಾವತಿ ಅವರು ಸ್ಕೂಟಿಯಲ್ಲಿ ಹಾವಿದೆ ಎಂಬುದನ್ನು ತಿಳಿದೂ ಐದಾರು ಕಿ.ಮೀ. ಚಲಿಸಿಕೊಂಡು ಬಂದಿದ್ದಾರೆ. ಬಳಿಕ ಸುರಕ್ಷಿತವಾಗಿ ಸೆರೆಹಿಡಿದ ಹಾವನ್ನು ಕಿರಣ್ ಕಾಡಿಗೆ ಬಿಟ್ಟುಬಂದರು.