ನ್ಯೂಸ್

ಶಿಕ್ಷಕರ ನೇಮಕ ಪ್ರಕ್ರಿಯೆ ಚುರುಕು; ಜಿಲ್ಲಾ, ವಿಷಯವಾರು ಮಾಹಿತಿ, ಕಲ್ಯಾಣ ಕರ್ನಾಟಕಕ್ಕೆ 5000 ಹುದ್ದೆ

theerthaswamy

ಬೆಂಗಳೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾವಾರು ಹಾಗೂ ವಿಷಯವಾರು ಹುದ್ದೆಗಳ ಮರು ಹಂಚಿಕೆ ಮಾಹಿತಿ ಪ್ರಕಟಿಸಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಹುದ್ದೆಗಳನ್ನು ಮೀಸಲಿರಿಸಲಾಗಿದೆ. 6,500 ಗಣಿತ, 5000 ಸಮಾಜ ವಿಜ್ಞಾನ, 2000 ಜೀವ ವಿಜ್ಞಾನ ಹಾಗೂ 1500 ಆಂಗ್ಲ ಭಾಷಾ ವಿಷಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ಇನ್ನು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು 1,271 ಹುದ್ದೆಗಳು, ಕಲಬುರಗಿ ಜಿಲ್ಲೆಗೆ 953 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ಜಿಲ್ಲೆಗಳ ಪೈಕಿ ಕನಿಷ್ಟ 100ಕ್ಕೂ ಹೆಚ್ಚು ಹುದ್ದೆಗಳಿಂದ ಗರಿಷ್ಟ 900ಕ್ಕೂ ಹೆಚ್ಚು ಹುದ್ದೆಗಳ ಹಂಚಿಕೆ ಮಾಡಲಾಗಿದೆ.

ಸಾವಿರ ಗ್ರೂಪ್ ಡಿ ನೌಕರರ ಭರ್ತಿ:

ಸರ್ಕಾರಿ ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ 1 ಸಾವಿರ ಗ್ರೂಪ್ ಡಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು. ವಿಧಾನಸಭೆ ಯಲ್ಲಿ ಕಾಂಗ್ರೆಸ್​ನ ಶಿವಾನಂದ ಪಾಟೀಲ್ ಪ್ರಶ್ನೆಗೆ ಉತ್ತರಿಸಿ, 1250 ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಪ್ರಾರಂಭವಾಗಿದೆ. 10,500 ಅತಿಥಿ ಉಪನ್ಯಾಸಕರ ನೇಮಕವಾಗಿದೆ. ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು. ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಶುಲ್ಕವನ್ನು ಆಯಾ ಕಾಲೇಜುಗಳ ಖಾತೆಗಳಲ್ಲಿ ಜಮೆ ಮಾಡಲು ತೀರ್ವನಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಕಾಲೇಜುಗಳಿಗೆ ವಾಚ್​ವೆುನ್, ಅಟೆಂಡರ್ ಸೇರಿ ಡಿ ಗ್ರೂಪ್ ಹುದ್ದೆಗಳು ಭರ್ತಿಯಾಗಬೇಕು. ನಮ್ಮ ಕ್ಷೇತ್ರದ ಸರ್ಕಾರಿ ಕಾಲೇಜಿನಲ್ಲಿ 3 ಸಾವಿರ ವಿದ್ಯಾರ್ಥಿಗಳಿದ್ದು 130 ಅತಿಥಿ ಉಪನ್ಯಾಸಕರಿದ್ದಾರೆ. ಶೇ.90 ಫಲಿತಾಂಶ ಬರುತ್ತಿದೆ. ಬೋಧಕೇತರ ಸಿಬ್ಬಂದಿ ನೇಮಕ ಮಾಡಬೇಕು ಎಂದರು. ಗೋಳಸಂಗಿ, ಬಸವನಬಾಗೇವಾಡಿ ಮತ್ತು ಮನಗೂಳಿ ಸರ್ಕಾರಿ ಪ್ರರ್ಥಮ ದರ್ಜೆ ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.