ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಆಶಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಡಿವಿಎಸ್ ಸಹಕಾರಿಯಾಗಿದೆ. ಗುಣಮಟ್ಟದ ಶಿಕ್ಷಣದಿಂದಲೇ ಸಂಸ್ಥೆ ಗುರುತಿಸಲ್ಪಟ್ಟಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಪಠ್ಯೇತರ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದರೆ ಶಿಕ್ಷಕರು ಸಾರ್ಥಕ ಭಾವ ಅನುಭವಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್, ಮೌಲ್ಯಯುತ ಅಂಶಗಳನ್ನು ಜೀವನದಲ್ಲಿ ಕಲಿಸುವುದು ಶಿಕ್ಷಕರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯ ಗುರುತಿಸಿ ಅವರನ್ನು ಜಾಗೃತಗೊಳಿಸುವ ಜತೆಗೆ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.
ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. 2022-23ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಕಲಾ ವಿಭಾಗದ ಎಸ್.ದೀಕ್ಷಾ, ವೃತ್ತಿ ಜೈನ್, ವಿಜ್ಞಾನ ವಿಭಾಗದ ಎಸ್.ವಿ.ಅನನ್ಯಾ, ವಾಣಿಜ್ಯ ವಿಭಾಗದ ಪೂರ್ಣಿಮಾ ವಿ.ಪ್ರಭು, ಶರಣ ವಿ.ಶೆಟ್ಟಿ, ಎಸ್.ಆರ್.ಗ್ರೀಷ್ಮಾ, ದಿಶಾ ಎನ್.ಅನ್ವೇಕರ್ ಹಾಗೂ ಬಿ.ಎಸ್.ದಿವ್ಯಶ್ರೀ ಅವರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಡಿಡಿಪಿಯು ಬಿ.ಕೃಷ್ಣಪ್ಪ, ಡಿವಿಎಸ್ ಸಹ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕ ಆರ್.ನಿತಿನ್, ಶಿಕ್ಷಕ ಪ್ರತಿನಿಧಿ ಡಾ. ಎಂ.ವೆಂಕಟೇಶ್, ಎಚ್.ಸಿ.ಉಮೇಶ್, ಪ್ರಾಚಾರ್ಯ ಎ.ಇ.ರಾಜಶೇಖರ್ ಉಪಸ್ಥಿತರಿದ್ದರು.