ನ್ಯೂಸ್

ಗಿಫ್ಟ್ ನೆಪದಲ್ಲಿ ಶಿಕ್ಷಕಿಗೆ 38 ಲಕ್ಷ ರೂ. ವಂಚನೆ: ಸೆಂಟ್ರಲ್​ ಸಿಇಎನ್ ಪೊಲೀಸ್ ಠಾಣೆಗೆ ದೂರು

ಬೆಂಗಳೂರು: ಫೇಸ್​ಬುಕ್​ನಲ್ಲಿ ಪರಿಚಯನಾದ ವ್ಯಕ್ತಿಯೊಬ್ಬ ದುಬಾರಿ ಉಡುಗೊರೆ ಮತ್ತು ಇಂಗ್ಲೆಂಡ್ ಪೌಂಡ್ಸ್ ಕಳುಹಿಸಿರುವುದಾಗಿ ನಂಬಿಸಿ ಶಿಕ್ಷಕಿಗೆ 38 ಲಕ್ಷ ರೂ. ವಂಚನೆ ಮಾಡಿದ್ದಾನೆ.

ಮಿಷನ್ ರಸ್ತೆಯ ಫಿಲೋಮಿನಾ(50) ವಂಚನೆಗೆ ಒಳಗಾದ ಶಿಕ್ಷಕಿ. ಇವರು ನೀಡಿದ ದೂರಿನ ಮೇರೆಗೆ ಫೇಲಿಕ್ಸ್ ಒವನ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಶಿಕ್ಷಕಿಗೆ ಫೇಸ್​ಬುಕ್​ನಲ್ಲಿ ಫೇಲಿಕ್ಸ್ ಪರಿಚಯವಾಗಿ ಒಳ್ಳೆಯ ಸ್ನೇಹಿತನಂತೆ ನಡೆದುಕೊಂಡಿದ್ದ. ಇಂಗ್ಲೆಂಡ್​ನಲ್ಲಿ ಫೈಲೆಟ್ ಆಗಿದ್ದು, ಸಾಕಷ್ಟು ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ನಿಮಗೆ ದುಬಾರಿ ಬೆಲೆಯ ಗಿಫ್ಟ್ ಮತ್ತು ಪೌಂಡ್ಸ್ ರೂಪದಲ್ಲಿ ಕರೆನ್ಸಿ ಕಳುಹಿಸುತ್ತೇನೆ. ಗಿಫ್ಟ್ ನೀವು ಇಟ್ಟುಕೊಂಡು ಪೌಂಡ್ಸ್ ಅನ್ನು ಭಾರತದ ರೂಪಾಯಿಗೆ ಬದಲಾವಣೆ ಮಾಡಿ ವಾಪಸ್ ಕೊಡುವಂತೆ ಫೇಲಿಕ್ಸ್, ಶಿಕ್ಷಕಿಗೆ ನಂಬಿಸಿದ್ದ.

ಇದಾದ ಕೆಲವೇ ದಿನಕ್ಕೆ ವಿಮಾನ ನಿಲ್ದಾಣದ ಕಾಗೋ ಸರ್ವೆಸ್​ನಿಂದ ಸೆಂಟರ್ ಹೆಸರಿನಲ್ಲಿ ಶಿಕ್ಷಕಿಗೆ ಕರೆ ಮಾಡಿ ನಿಮಗೆ ಗಿಫ್ಟ್ ಬಾಕ್ಸ್ ಬಂದಿದೆ. ಅದನ್ನು ಪಡೆಯಬೇಕಾದರೆ ಕಸ್ಟಮ್ ಶುಲ್ಕ ಪಾವತಿ ಮಾಡಬೇಕೆಂದು ಸೂಚನೆ ನೀಡಿದ್ದರು. ಇತ್ತ ಶಿಕ್ಷಕಿ, ತನ್ನ ಇಂಗ್ಲೆಂಡ್ ಸ್ನೇಹಿತ ಫೇಲಿಕ್ಸ್ ಮೊಬೈಲ್​ಗೆ ಕರೆ ಮಾಡಿ ವಿಚಾರಿಸಿದಾಗ ಪಾರ್ಸೆಲ್ ಕಳುಹಿಸಿರುವುದಾಗಿ ಸುಳ್ಳು ಹೇಳಿದ್ದ. ಇದನ್ನು ನಂಬಿದ ಶಿಕ್ಷಕಿ, ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 38.40 ಲಕ್ಷ ರೂ. ಪಾವತಿ ಮಾಡಿದ್ದಾರೆ. ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಫೇಲಿಕ್ಸ್ ಬಳಿ ವಾಪಸ್ ಹಣ ಕೇಳಿದಾಗ ಆತ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾನೆ.

ನೊಂದ ಶಿಕ್ಷಕಿ, ದಿಕ್ಕು ತೋಚದೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.