ಅಮರಾವತಿ: ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ಜೂನ್ 9 ರಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿಡಿಪಿ ನೇತೃತ್ವದ ಮೈತ್ರಿಕೂಟ 175 ವಿಧಾನಸಭಾ ಕ್ಷೇತ್ರಗಳ ಪೈಕಿ 165 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ನಾಯ್ಡು ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದ್ದಾರೆ.
74 ವರ್ಷದ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು 1995 ರಿಂದ 2004 ರವರೆಗೆ ಸಂಯುಕ್ತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆದರೆ 2014 ರಲ್ಲಿ ರಾಜ್ಯ ವಿಭಜನೆಯ ನಂತರ ಉಳಿದ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾದರು. ಆದರೆ 2019 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿತ್ತು.
ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ (ಜೆಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗಿನ ಚಂದ್ರಬಾಬು ಮೈತ್ರಿ ಮಾಡಿಕೊಂಡಿದ್ದು ಗೇಮ್ ಚೇಂಜರ್ ಆಗಿ ಕಾಣಿಸಿಕೊಂಡಿದೆ. ಒಟ್ಟು 175 ಕ್ಷೇತ್ರಗಳಲ್ಲಿ ಟಿಡಿಪಿ 94ರಲ್ಲಿ, ಜನಸೇನಾ 17, ಬಿಜೆಪಿ 7 ಕ್ಷೇತ್ರಗಳಲ್ಲಿ ಗೆದ್ದಿದ್ದು, ಸ್ಪಷ್ಟ ಮುನ್ನಡೆಯೊಂದಿಗೆ, ಟಿಡಿಪಿ ತನ್ನದೇ ಆದ ಬಹುಮತವನ್ನು ಪಡೆದುಕೊಂಡಿದೆ. ನಾಯ್ಡು ಅವರು 1989 ರಿಂದ ಪ್ರತಿನಿಧಿಸುತ್ತಿರುವ ಕುಪ್ಪಂ ಕ್ಷೇತ್ರದಲ್ಲಿ, ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮಂಗಳಗಿರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ನಾಯ್ಡು ನೇತೃತ್ವದ ಪಕ್ಷವು 25 ಲೋಕಸಭಾ ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತ್ರಿಪಕ್ಷೀಯ ಮೈತ್ರಿಕೂಟವು 21 ಸ್ಥಾನಗಳಲ್ಲಿ ಮುಂದಿದೆ. 2019 ರಲ್ಲಿ ಟಿಡಿಪಿ ಕೇವಲ 23 ವಿಧಾನಸಭೆ ಮತ್ತು ಮೂರು ಲೋಕಸಭೆ ಸ್ಥಾನಗಳನ್ನು ಗೆದ್ದುಕೊಂಡಿತ್ತು.