ನ್ಯೂಸ್

40 ವರ್ಷಗಳ ಬಳಿಕ ರಾಜ್ಯಸಭೆಗೆ TDP ಸ್ಪರ್ಧೆ.. ಮೂರು ಸ್ಥಾನಗಳನ್ನು ವಶಪಡಿಸಿಕೊಳ್ಳುವ ನಿರೀಕ್ಷೆ!

ಆಂಧ್ರಪ್ರದೇಶ: ಸಾಕಷ್ಟು ಸಂಖ್ಯೆಯ ಶಾಸಕರ ಕೊರತೆಯಿಂದಾಗಿ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ದೂರವಿದ್ದ ತೆಲುಗು ದೇಶಂ ಪಾರ್ಟಿ(TDP) ಈ ಬಾರಿ ಮೂರು ರಾಜ್ಯಸಭಾ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ 40 ವರ್ಷದ ಬಯಕೆ ಈಡೇರುವ ಮಹತ್ವಾಂಕ್ಷೆಯಲ್ಲಿ ಟಿಡಿಪಿ ಇದೆ.

ಹೌದು, ಕಳೆದ ಜೂನ್​ನಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟ 164 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ತೆಲುಗು ದೇಶಂ ಪಾರ್ಟಿ 135, ಜನಸೇನಾ 21 ಮತ್ತು ಭಾರತೀಯ ಜನತಾ ಪಾರ್ಟಿ 8 ಸ್ಥಾನಗಳನ್ನು ಪಡೆದುಕೊಂಡಿವೆ. ಶಾಸಕರ ಕೊರತೆಯಿಂದಾಗಿ 40 ವರ್ಷದಿಂದ ರಾಜ್ಯಸಭೆ ಚುನಾವಣೆಯಿಂದ ದೂರವಿದ್ದ ಟಿಡಿಪಿ, ಈ ಬಾರಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಖಾಲಿಯಾಗಿರುವ ಮೂರು ಕ್ಷೇತ್ರಗಳನ್ನು ವಶ ಪಡಿಸಿಕೊಳ್ಳುವ ನಿರೀಕ್ಷೆ ಇದೆ. ಇನ್ನು ವಿರೋಧ ಪಕ್ಷದ ಸ್ಥಾನದಲ್ಲಿರುವ ವೈಎಸ್​ಆರ್​ ಕಾಂಗ್ರೆಸ್​ಗೆ ಅಗತ್ಯ ಇರುವಷ್ಟು ಶಾಸಕರ ಬಲ ಇಲ್ಲದಿರುವುದರಿಂದ ಸ್ಪರ್ಧಿಸುವ ಸಾಧ್ಯತೆ ತೀರ ಕಡಿಮೆ ಇದೆ ಎನ್ನಲಾಗಿದೆ.

ಡಿಸೆಂಬರ್​ 20ಕ್ಕೆ ಫಲಿತಾಂಶ

ವೈಎಸ್​ಆರ್​ ಪಕ್ಷದ ರಾಜ್ಯಸಭಾ ಸದಸ್ಯರಾದ ಮೋಪಿದೇವಿ ವೆಂಕಟರಮಣ, ಬೀಡಾ ಮಸ್ತಾನ್​ ರಾವ್​ ಮತ್ತು ಆರ್​ ಕೃಷ್ಣಯ್ಯ ಅವರು ರಾಜೀನಾಮೆ ನೀಡಿದ ಆಂಧ್ರಪ್ರದೇಶಲ್ಲಿನ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಲು ಭಾರತೀಯ ಚುನಾವಣೆ ಆಯೋಗ ಉಪಚುನಾವಣೆ ಘೋಷಿಸಿದೆ. ಜತೆಗೆ ಡಿ.20ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಕೃಷ್ಣಯ್ಯ ತಮ್ಮ ಅಧಿಕಾರವಧಿ ಇನ್ನು ನಾಲ್ಕು ವರ್ಷ ಇರುವಾಗಲೇ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಮೋಪಿದೇವಿ ವೆಂಕಟರಮಣ ಮತ್ತು ಬೀಡಾ ಮಸ್ತಾನ್​ ರಾವ್​ ರಾಜೀನಾಮೆ ನೀಡಿದ ಬಳಿಕ ಟಿಡಿಪಿ ಪಕ್ಷಕ್ಕೆ ಸೇರಿಕೊಳ್ಳುವುದಾಗಿ ಘೋಷಿಸಿದ್ದಾರೆ, (ಏಜೆನ್ಸೀಸ್​).