ಬೆಂಗಳೂರು: ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿಯ ಐಟಿ ಇನ್ಫ್ರಾಸ್ಟ್ರಕ್ಚರ್ನ ಗ್ಲೋಬಲ್ ಹೆಡ್ 53 ವರ್ಷದ ಅಮಿತ್ ಜೈನ್ ಭಾರಿ ಹೃದಯಾಘಾತಕ್ಕೆ ಒಳಗಾಗಿ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ. ಆದರೆ ಈ ನಿಧನದ ಹಿಂದಿನ ಕಾರಣವನ್ನು ದ ಹಿಂದು ಬಿಸಿನೆಸ್ ಲೈನ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಎಲ್ಲರೂ ಖೇದಿಸುವಂತೆ ಇದೆ ಆ ಕರುಣಾಜನಕ ವಿದ್ಯಮಾನ.
ಮೂಲಗಳನ್ನು ಉಲ್ಲೇಖಿಸಿದ ವರದಿ ಪ್ರಕಾರ, ಕರೊನಾ ವೈರಸ್ ನಿಂದ ಹರಡುತ್ತಿರುವ Covid19 ಸೋಂಕು ತೀವ್ರಗೊಂಡ ಕಾರಣ #WorkFromHome ವ್ಯವಸ್ಥೆಗಾಗಿ ಕಡಲಾಚೆಯ ಡೆಲಿವರಿ ಸೆಂಟರನ್ನು ಸಕ್ರಿಯಗೊಳಿಸುವ ತೀವ್ರ ಒತ್ತಡ ಅವರ ಮೇಲಿತ್ತು. ಒಂದು ವಾರದಿಂದ ನಿದ್ದೆ ಮಾಡದೇ ಪ್ರೆಸೆಂಟೇಷನ್ ಸಿದ್ಧಪಡಿಸಿದ್ದ ಅವರು, ಕಂಪನಿಯ ಹಿರಿಯ ಎಕ್ಸಿಕ್ಯೂಟಿವ್ಸ್ಗೆ ಪ್ರೆಸೆಂಟೇಷನ್ ತೋರಿಸುತ್ತಿದ್ದಾಗ ಭಾರಿ ಹೃದಯಘಾತಕ್ಕೆ ಒಳಗಾಗಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹಲವು ಊಹಾಪೋಹಗಳೊಂದಿಗೆ ಹರಿದಾಡುತ್ತಿದೆ.
ಈ ಬಗ್ಗೆ ಅಮಿತ್ ಜೈನ್ ಅವರ ಸಹೋದರ ಮುಕುಲ್ ಜೈನ್ ಅವರು ಪ್ರತಿಕ್ರಿಯಿಸಿದ್ದು, ನನ್ನ ಸಹೋದರನಿಗೆ ಮಾರ್ಚ್ 17ರಂದು ಅಪರಾಹ್ನ 3.30ಕ್ಕೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದೆ. ಕೂಡಲೇ ಅವರನ್ನು ಕೆಲಸದ ಸ್ಥಳಕ್ಕೆ ಹತ್ತಿರದ ಹಿರಾನಂದಾನಿ ಹಾಸ್ಪಿಟಲ್ಗೆ ಸೇರಿಸಲಾಗಿತ್ತು. ಅಲ್ಲಿ ಅಮಿತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು. ಹೀಗಾಗಿ 19ರಂದು ನಾವು ಅವರನ್ನು ಕಳೆದುಕೊಂಡೆವು. ಈ ಎಲ್ಲ ಅವಧಿಯಲ್ಲೂ ಟಿಸಿಎಸ್ ನಮ್ಮೊಂದಿಗೆ ಇತ್ತು. ಅಮಿತ್ ಅವರನ್ನು ಉಳಿಸುವ ನಿಟ್ಟಿನಲ್ಲಿ ಕಂಪನಿ ಗರಿಷ್ಠ ಪ್ರಯತ್ನ ಮಾಡಿದೆ. ಅಮಿತ್ ಅವರು 32 ವರ್ಷಗಳ ಕಾಲ ಟಿಸಿಎಸ್ಗೆ ಕೆಲಸ ಮಾಡಿದ್ದಾರೆ. ಅವರು ಧೂಮಪಾನಿಯಲ್ಲ, ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವಂಥವರಾಗಿದ್ದರು. ಅವರಿಗೆ ಬಿಪಿ ಅಥವಾ ಇನ್ನಾವುದೇ ರೋಗಗಳು ಇರಲಿಲ್ಲ. ಹಾರ್ಡ್ ವರ್ಕರ್ ಆಗಿದ್ದ ಅವರಿಗೆ ಎಲ್ಲರಿಗೂ ಇರುವಂಥ ಸ್ಟ್ರೆಸ್ ಇತ್ತಷ್ಟೆ. ಟಿಸಿಎಸ್ನ 4 ಲಕ್ಷ ಉದ್ಯೋಗಿಗಳ #WorkFromHome ವ್ಯವಸ್ಥೆ ಜಾರಿಗೊಳಿಸುವ ಮಹತ್ವದ ಹೊಣೆಗಾರಿಕೆ ಅವರ ಮೇಲಿತ್ತು. Covid19 ಕಂಟಕ ಕೆಲಸದ ಸ್ಟ್ರೆಸ್ ರೂಪದಲ್ಲಿ ಕಾಡಿದ್ದು ವಿಪರ್ಯಾಸ. ಆದರೂ ಸ್ಟ್ರೆಸ್ ಯಾರಿಗೆ ಇರಲ್ಲ ಹೇಳಿ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)