ನವದೆಹಲಿ: ನಿನ್ನೆ (ಜೂ.28) ಬೆಳಗ್ಗೆಯಿಂದಲೇ ಸುರಿದ ಧಾರಕಾರ ಮಳೆಗೆ ದೆಹಲಿ-ಎನ್ಸಿಆರ್ ಸಂಪೂರ್ಣವಾಗಿ ತತ್ತರಿಸಿತು. ಸಿಡಿಲು, ಗುಡುಗಿನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ಪ್ರಮುಖ ರಸ್ತೆಗಳು ಮಳೆಗೆ ಜಲಾವೃತಗೊಂಡಿತ್ತು. ಮಳೆಯ ಆರ್ಭಟಕ್ಕೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಮೇಲ್ಛಾವಣಿ ಕುಸಿದು ಓರ್ವ ಸಾವಿಗೀಡಾಗಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾದರು. ಮೃತ ವ್ಯಕ್ತಿ ವೃತ್ತಿಯಲ್ಲಿ ಕಾರು ಚಾಲಕ ಎಂದು ವರದಿಯಾಗಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಛಾವಣಿ ಕುಸಿದು ಟ್ಯಾಕ್ಸಿ ಚಾಲಕ ಮೃತಪಟ್ಟರು. ಕಬ್ಬಿಣದ ಬೀಮ್ ಬಿದ್ದ ಪರಿಣಾಮ ಕಾರಿನಲ್ಲಿದ್ದ ಚಾಲಕ ರಮೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಸಾವನ್ನಪ್ಪಿರುವುದು ವೈದ್ಯರಿಂದ ಧೃಡವಾಯಿತು. 45 ವರ್ಷದ ರಮೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದೆಹಲಿಯ ರೋಹಿಣಿಯಲ್ಲಿರುವ ವಿಜಯ್ ವಿಹಾರ್ ನಿವಾಸಿಯಾದ ಮೃತ ರಮೇಶ್, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಡೀ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ರಮೇಶ್ ಇನ್ನಿಲ್ಲ ಎಂಬ ಸುದ್ದಿ ಇದೀಗ ಅವರ ಮಕ್ಕಳಿಗೆ ದೊಡ್ಡ ಆಘಾತವನ್ನು ತಂದೊಡ್ಡಿದೆ. ತಂದೆಯ ಆಸರೆಯಿಲ್ಲದೆ ಕುಟುಂಬ ನಿರ್ವಹಣೆ ಹೇಗೆ? ಎಂದು ಅವರ ಪುತ್ರ ರವೀಂದ್ರ ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).