ನವದೆಹಲಿ: ವಾರ್ಷಿಕ 2.5 ಲಕ್ಷ ರೂಪಾಯಿಗೆ ಮೀರಿ ನೌಕರರ ಭವಿಷ್ಯ ನಿಧಿ (ಇಪಿಎಫ್)ಗೆ ದೇಣಿಗೆ ಮೇಲೆ ತೆರಿಗೆ ವಿಧಿಸಲು ಮತ್ತು ಗರಿಷ್ಠ ಮಿತಿ 5 ಲಕ್ಷ ರೂಪಾಯಿ ನಿಗದಿಪಡಿಸಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಇದು 2022ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.
ಪಿಎಫ್ ಖಾತೆಯ ವಾರ್ಷಿಕ ಬಡ್ಡಿದರ 40 ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇಕಡ 8.1) ಇಳಿಕೆಯಾಗಿದೆ. 1977-78ರಿಂದ ಶೇಕಡ 8 ಬಡ್ಡಿದರ ಇತ್ತು. ಆದಾಯ ತೆರಿಗೆ ಹೊಸ ನಿಯಮದಲ್ಲಿ ಇದು ಇರಲಿದ್ದು, ಪಿಎಫ್ ಖಾತೆಗಳನ್ನು ತೆರಿಗೆಯುಕ್ತ ಮತ್ತು ತೆರಿಗೆ ರಹಿತ ದೇಣಿಗೆ ಖಾತೆಗಳೆಂದು ವರ್ಗೀಕರಿಸಲಾಗುತ್ತದೆ.
ಉದಾಹರಣೆಗೆ ಸರ್ಕಾರೇತರ ಉದ್ಯೋಗಿ 5 ಲಕ್ಷ ರೂಪಾಯಿಯನ್ನು ಪಿಎಫ್ ಖಾತೆಗೆ ಜಮೆ ಮಾಡಿದರೆ 2.5 ಲಕ್ಷ ರೂಪಾಯಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಇದೇ ರೀತಿ ಸರ್ಕಾರಿ ಉದ್ಯೋಗಿಗಳ ಪಿಎಫ್ ಖಾತೆ ಜನರಲ್ ಪಿಎಫ್ ಆಗಿದ್ದು, ಸಂಪೂರ್ಣವಾಗಿ 5 ಲಕ್ಷ ರೂಪಾಯಿಯನ್ನು ಅವರೇ ಸ್ವತಃ ಪಾವತಿಸಿರುತ್ತಾರೆ. ಹೀಗಾಗಿ, ಒಬ್ಬ ಸರ್ಕಾರಿ ಉದ್ಯೋಗಿ 6 ಲಕ್ಷ ರೂಪಾಯಿ ಪಿಎಫ್ ಖಾತೆಗೆ ಜಮೆ ಮಾಡಿದರೆ 1 ಲಕ್ಷ ರೂಪಾಯಿ ಮಾತ್ರವೇ ತೆರಿಗೆ ವ್ಯಾಪ್ತಿಗೆ ಬರುತ್ತದೆ.