ನ್ಯೂಸ್

ಖನಿಜ ಭೂಮಿ ಮಾಲೀಕರಿಗೆ ಟ್ಯಾಕ್ಸ್! ಪ್ರತಿ ಟನ್​ಗೆ 100 ರೂ. ನಿಗದಿ, ರಾಜಧನ ದರ ಹೆಚ್ಚಳ

  • ಕಲ್ಲು ಗಣಿ ಒತ್ತುವರಿ ದಂಡದ ವ್ಯಾಜ್ಯ, ಒಂದು ಬಾರಿಗೆ ಇತ್ಯರ್ಥ
  • ಠೇವಣಿ ಅಂತರ್ ನಿಗಮ ವರ್ಗಾವಣೆಗೆ ಅನುಮೋದನೆ

ಬೆಂಗಳೂರು: ಖನಿಜ ಹೊಂದಿರುವ ಜಮೀನಿನ ಮಾಲೀಕರಿಗೆ ಹೊಸದಾಗಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಹರಾಜು ಹೊರತುಪಡಿಸಿದ ಗಣಿ ಗುತ್ತಿಗೆಗಳಿಗೆ ಖನಿಜ ಹಕ್ಕುಗಳ ತೆರಿಗೆ ವಿಧಿಸಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಣಯಿಸಲಾಗಿದೆ.

ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜವುಳ್ಳ ಜಮೀನು) ತೆರಿಗೆ ವಿಧೇಯಕ, 2024 ಸಿದ್ಧವಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಹೊಸ ತೆರಿಗೆ, ಹರಾಜೇತರ ಗಣಿಗೆ ಗುತ್ತಿಗೆಗಳಿಗೆ ಖನಿಜ ಹಕ್ಕು ತೆರಿಗೆ, ರಾಜಧನ ದರ ಏರಿಕೆ, ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲ್ಲು ಗಣಿಗಾರಿಕೆ ಒತ್ತುವರಿ ಪ್ರಕರಣಗಳನ್ನು ‘ಒಂದು ಬಾರಿಗೆ ಇತ್ಯರ್ಥ’ ಮಾಡುವುದು, ಹೀಗೆ ಪ್ರಮುಖ ನಿರ್ಧಾರಗಳ ಮೂಲಕ ಬೊಕ್ಕಸದ ಆದಾಯ ವೃದ್ಧಿಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಈ ವಿಷಯ ತಿಳಿಸಿದ್ದಾರೆ.

ಖನಿಜ ಹಕ್ಕುಗಳ ತೆರಿಗೆ ಸರಾಸರಿ ಮಾರಾಟ ದರದ (ಎಎಸ್​ಪಿ) ಶೇ.60ರಷ್ಟು ಪರಿಗಣಿಸಿದರೆ ವಾರ್ಷಿಕ ಹೆಚ್ಚುವರಿ 4,207.95 ಕೋಟಿ ರೂ. ಆದಾಯ ಲಭ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ, ಖನಿಜವಿರುವ ಜಮೀನಿನ ಮಾಲೀಕರಿಗೆ ಪ್ರತಿ ಟನ್​ಗೆ 100 ರೂ. ತೆರಿಗೆ ವಿಧಿಸಲಿದೆ. ಆ ಮೂಲಕ 505.90 ಕೋಟಿ ರೂ. ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆ. ಹರಾಜು ಮಾಡಿದ ಗಣಿಗಾರಿಕೆಗಳು ಶೇ.60ಕ್ಕಿಂತ ಹೆಚ್ಚು ಎಎಸ್​ಪಿ ಮೊತ್ತವನ್ನು ಪಾವತಿಸುತ್ತವೆ. ಉಳಿದ ಎಲ್ಲ ವರ್ಗಗಳ ಗಣಿ ಗುತ್ತಿಗೆಗಳಿಗೆ ತೆರಿಗೆ ಹಕ್ಕುಗಳನ್ನು ಕಾಯ್ದಿರಿಸುವ ಸಲುವಾಗಿ ರಾಜಧನದ ಮೇಲೆ ಶೇ.0.25ರಷ್ಟು ಖನಿಜ ಹಕ್ಕುಗಳ ತೆರಿಗೆಯಾಗಿ ವಿಧಿಸಲೂ ನಿರ್ಧರಿಸಲಾಗಿದೆ ಎಂದು ವಿವರಿಸಿದರು.

311 ಕೋಟಿ ರೂ. ನಿರೀಕ್ಷೆ

ಗಣಿಗಾರಿಕೆ ಮೂಲಕ ಹೊರ ತೆಗೆದು ಸಾಗಿಸುವ ಖನಿಜಗಳಿಗೆ ವಿಧಿಸುತ್ತಿದ್ದ ಪ್ರತಿ ಟನ್ ಖನಿಜ ದರವನ್ನು 70 ರೂ.ಗಳಿಗೆ 80 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ 311.55 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆಯಿದೆ. ರಾಜಧನ ದರ ಹೆಚ್ಚಳಕ್ಕಾಗಿ ‘ಕರ್ನಾಟಕ ಉಪಖನಿಜ ರಿಯಾ ಯಿತಿ (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.

ಅಕ್ರಮ ನಿಯಂತ್ರಣ

ಬಾಕ್ಸೈಟ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ ಸೇರಿ ಎಲ್ಲ ರೀತಿಯ ಖನಿಜವಿರುವ ಜಮೀನಿನ ಮಾಲೀಕರಿಗೆ ಪ್ರತಿ ಟನ್​ಗೆ ಕನಿಷ್ಠ 20 ರೂ.ನಿಂದ 100 ರೂ. ವರೆಗೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಈ ಜಮೀನಿನಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿದ್ದರೂ ಮಾಲೀಕನಿಗೆ ಜಮೀನಿನ ಹಕ್ಕು ರಕ್ಷಣೆಯಾಗಲಿದೆ. ಅಲ್ಲದೆ, ಅಕ್ರಮ ಅಥವಾ ಅನಧಿಕೃತ ಗಣಿಗಾರಿಕೆ ನಿಯಂತ್ರಿಸಲು ಸಾಧ್ಯವಿದೆ ಎಂದು ಎಚ್.ಕೆ. ಪಾಟೀಲ ಸಮರ್ಥಿಸಿಕೊಂಡಿದ್ದಾರೆ.

ಒನ್ ಟೈಮ್ ಸೆಟಲ್​ವೆುಂಟ್

ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಅನುಮತಿಗಿಂತ ಹೆಚ್ಚಿನ ಪ್ರದೇಶ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ್ದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಂಡ ವಿಧಿಸಿತ್ತು. ಆದರೆ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದವರು ತಕರಾರು ತೆಗೆದ ಕಾರಣ ಕಳೆದ ಆರು ವರ್ಷಗಳಿಂದ 2438 ಕಲ್ಲು ಗಣಿಗಳು 1,221 ಕೋಟಿ ರೂ. ರಾಜಧನ, 4,884 ಕೋಟಿ ರೂ. ದಂಡದ ಮೊತ್ತ ಸೇರಿ 6,105 ಕೋಟಿ ರೂ. ವಸೂಲಿಯಾಗದೇ ಉಳಿದಿದೆ. ಆರು ವರ್ಷಗಳಿಂದ ವಿವಾದವೂ ಬಗೆಹರಿದಿಲ್ಲ. ಸರ್ಕಾರಕ್ಕೆ ಬರಬೇಕಾದ ಹಣವೂ ಬಂದಿಲ್ಲ. ಈ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಡ್ರೋನ್ ಸಹಾಯದಿಂದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಡಿಜಿಪಿಎಸ್) ಸಮೀಕ್ಷೆ ಮೂಲಕ ನಿಖರವಾಗಿ ಗಣಿ ಗುತ್ತಿಗೆ ಪ್ರದೇಶ, ಒತ್ತುವರಿ ಪ್ರಮಾಣ ಖಚಿತಪಡಿಸಿಕೊಳ್ಳಲಾಗಿದೆ. ಒಟ್ಟು 11 ಜಿಲ್ಲೆಗಳಲ್ಲಿ ಈ ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನೂ 20 ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯದ ವರದಿ ಬರಬೇಕಾಗಿದೆ. ವೈಜ್ಞಾನಿಕ ಸಮೀಕ್ಷೆಯಿಂದ ಒಟ್ಟಾರೆ ಒತ್ತುವರಿ ಎಷ್ಟೆಂಬುದು ಗೊತ್ತಾಗಲಿದ್ದು, ದಂಡದ ಮೊತ್ತ ಹೆಚ್ಚಳವಾಗುವ ಸಾಧ್ಯತೆಗಳಿವೆ.

‘ಒಂದು ಬಾರಿಗೆ ಇತ್ಯರ್ಥ’ (ಒಟಿಎಸ್) ಸ್ಕೀಮ್ ಅನುಷ್ಠಾನ ಗೊಳಿಸಿ ಕಲ್ಲು ಗಣಿಗಾರಿಕೆ ಗುತ್ತಿಗೆದಾರರಿಂದ ರಾಯಲ್ಟಿ ಮತ್ತು ದಂಡದ ಮೊತ್ತ ವಸೂಲಿ ಮಾಡಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಒಟಿಎಸ್ ಎಂದ ಮೇಲೆ ವಸೂಲಿ ಮೊತ್ತದಲ್ಲಿ ವ್ಯತ್ಯಾಸವಾಗಬಹುದು. ವೈಜ್ಞಾನಿಕ ಸಮೀಕ್ಷಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಚಿವ ಸಂಪುಟ ಸಲಹೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅಂತರ್ ನಿಗಮ ಠೇವಣಿ ಹೂಡಿಕೆ

ಸಾರ್ವಜನಿಕ ವಲಯದ ಉದ್ಯಮಗಳ ಠೇವಣಿಗಳ ಅಂತರ್ ನಿಗಮ ಹೂಡಿಕೆಗೆ ಅನುಮತಿ ನೀಡಲಾಗಿದೆ. ಇದರಿಂದ ಬ್ಯಾಂಕ್​ಗಳು ನೀಡುವ ಬಡ್ಡಿ ದರಗಳಿಗಿಂತ ಅಂತರ್ ನಿಗಮದ ಠೇವಣಿ ಮೂಲಕ ನಿಗಮಗಳ ಆದಾಯ ವೃದ್ಧಿಸುತ್ತದೆ. ಸಾರ್ವಜನಿಕ ಉದ್ದಿಮೆಗಳು ಎದುರಿಸುತ್ತಿರುವ ನಷ್ಟದಿಂದ ಆರ್ಥಿಕ ಒತ್ತಡ ಹೆಚ್ಚಾಗಿ ಸಾಲಕ್ಕೆ ಮೊರೆ ಹೋಗುವುದನ್ನು ಅಂತರ್ ನಿಗಮ ಠೇವಣಿ ಹೂಡಿಕೆ ತಪ್ಪಿಸಲಿದೆ. ಕಂಪನಿ ಕಾಯ್ದೆಯಡಿ ನಿಗಮಗಳು ನೋಂದಣಿಯಾಗಿರುವ ಕಾರಣ ಆರ್​ಬಿಐ ನಿಯಮಾವಳಿ ಉಲ್ಲಂಘನೆಯಾಗದು. ಇಷ್ಟಕ್ಕೂ ಹೆಚ್ಚುವರಿ ನಿಧಿಯುಳ್ಳ ನಿಗಮ, ಹಣದ ಅವಶ್ಯಕತೆಯುಳ್ಳ ಮತ್ತೊಂದು ನಿಗಮಕ್ಕೆ ಠೇವಣಿ ನೀಡುತ್ತದೆ. ಅಂತರ್ ನಿಗಮ ಹೂಡಿಕೆ ಸರ್ಕಾರವೇ ಖಾತರಿ ನೀಡುತ್ತದೆ. ಹೆಚ್ಚುವರಿ ನಿಧಿಯುಳ್ಳ ನಿಗಮಗಳಿಗೆ ಶೇ.2ರಷ್ಟು ಹೆಚ್ಚಿನ ಬಡ್ಡಿ ದರದ ಆದಾಯ, ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯುತ್ತಿದ್ದ ನಿಗಮಗಳ ಹೊರೆಯೂ ತಗ್ಗಲಿದೆ ಎಂದು ಎಚ್.ಕೆ.ಪಾಟೀಲ ವಿವರಿಸಿದರು.