ನ್ಯೂಸ್

ಟಾಟಾ ಏಸ್​ ವಾಹನ ಪಲ್ಟಿ; ಕೂಲಿ ಕೆಲಸ ಮುಗಿಸಿ ವಾಪಸ್​ ಆಗುತ್ತಿದ್ದ 35 ಮಂದಿಗೆ ಗಾಯ

ವಿಜಯಪುರ: ಟಾಟಾ ಏಸ್​ ವಾಹನ ಪಲ್ಟಿಯಾಗಿ ಸುಮಾರು 35 ಮಂದಿ ಗಾಯಗೊಂಡ ಘಟನೆ ಇಂಡಿ ತಾಲೂಕಿನ ನಾದ ಕೆ.ಡಿ.ಗ್ರಾಮದ ಬಳಿ ನಡೆದಿದೆ.

ಗಾಯಾಳುಗಳು ಇಂಡಿ ತಾಲೂಕಿನ ದೇಶಪಾಂಡೆ ಹಾಗೂ ಆಳೂರ್ ತಾಂಡಾದವರಾಗಿದ್ದು ಕೂಲಿ ಕೆಲಸ ಮುಗಿಸಿ ಟಾಟಾ ಏಸ್​ನಲ್ಲಿ ವಾಪಸ್​ ಬರುತ್ತಿದ್ದರು ಎನ್ನಲಾಗಿದೆ. ಬಸ್​ ಓವರ್​ ಟೇಕ್​ ಮಾಡಲು ಚಾಲಕ ಪ್ರಯತ್ನಿಸಿದಾಗ ಟಾಟಾ ಏಸ್​ ಗುಂಡಿಗೆ ಬಿದ್ದು ಅಪಘಾತ ಉಂಟಾಗಿದೆ.

ಗಾಯಾಳುಗಳಲ್ಲಿ ಕೆಲವರಿಗೆ ಇಂಡಿ ತಾಲೂಕಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.