| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕನ್ನಡಿಗರು ಕನ್ನಡಕ್ಕಿಂತಲೂ ಪೆಟ್ರೋಲ್ ಹೆಚ್ಚು ಬಳಸುತ್ತಾರೆಂಬ ವ್ಯಂಗ್ಯದ ಮಾತನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕರಲ್ಲಿ ಕನ್ನಡ ಬಳಕೆ ಹೆಚ್ಚಿಸುವಂತೆ ಮನವೊಲಿಸಲು ತೀರ್ವನಿಸಿದೆ. ಈ ಉದ್ದೇಶಕ್ಕಾಗಿ ಸಂಹಿತೆ ರೂಪಿಸಿ ಕನ್ನಡ ಕಾಯಕ ಪಡೆ ಯನ್ನು ರಚಿಸಲು ಮುಂದಾಗಿದೆ.
ಕನ್ನಡ ಕಾಯಕ ವರ್ಷ ಆಚರಿಸುತ್ತಿರುವ ಸರ್ಕಾರ ಆ ಕಾರ್ಯಕ್ಕೆ ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳನ್ನು ಒಳಗೊಳ್ಳುವಂತೆ ಮಾಡಲು 21 ಸೂತ್ರ ರಚಿಸಿದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜನರ ಮನವೊಲಿಸುವ ಕಾರ್ಯಕ್ಕಾಗಿ ಕನ್ನಡ ಕಾಯಕ ಪಡೆ ರಚಿಸುವ ಜವಾಬ್ದಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ್ದಾಗಿದೆ. ಪಡೆ ರಚನೆಗೆ ಈಗಾಗಲೇ ಸಿಎಂ ಅನುಮತಿ ನೀಡಿದ್ದು, ಪ್ರಾಧಿಕಾರದ ವೆಬ್ಸೈಟ್ನಲ್ಲಿ ಯಾರು ಬೇಕಾದರೂ ನೋಂದಾಯಿಸಿಕೊಳ್ಳಬಹುದು. ಅಂತಹವರಿಗೆ ಕಾಯಕ ಪಡೆಯ ಸದಸ್ಯ ಎಂಬ ನೇಮಕಾತಿ ಪತ್ರ ಸಿಗುತ್ತದೆ.
ಜಾಗೃತ ಸಮಿತಿ: ಕನ್ನಡ ಬಳಕೆ ಹೆಚ್ಚಿಸುವ ಕುರಿತಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಲಾಗುತ್ತದೆ. ಜಿಲ್ಲಾ ಹಾಗೂ ತಾಲೂಕು ಜಾಗೃತ ಸಮಿತಿಗೆ ತಲಾ ಐವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ಜನರ ಸಮಿತಿ ಇರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಿಗೆ ಕೆಲವು ಜಿಲ್ಲೆಗಳ ಉಸ್ತುವಾರಿ ನೀಡಲಾಗುತ್ತದೆ. ಸದಸ್ಯರು ಜಾಗೃತ ಸಮಿತಿಯ ಜತೆಗೆ ಕನ್ನಡ ಅನುಷ್ಠಾನ ಕುರಿತಂತೆ ಕಾರ್ಯಕ್ರಮ ಮಾಡಬಹುದು. ಕಾಯಕ ಪಡೆಯ ಸದಸ್ಯರ ಮೇಲೂ ನಿಗಾ ವಹಿಸಬೇಕು. ಜಾಗೃತ ಸಮಿತಿಗೆ ನೇಮಕಾತಿ ಒಂದೆರಡು ದಿನಗಳಲ್ಲಿ ಮುಗಿಯಲಿದೆ.
ಕನ್ನಡ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಕಾಯಕ ಪಡೆ ರಚಿಸಲಾಗುತ್ತದೆ.
| ಟಿ.ಎಸ್. ನಾಗಾಭರಣ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಸಾರ್ವಜನಿಕರಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಯಾವುದೇ ಕೀಳರಿಮೆ ಇಲ್ಲದೆ ಎಲ್ಲ ಕಡೆ ಕನ್ನಡ ಬಳಸುವಂತಾಗಬೇಕು. ಅದಕ್ಕಾಗಿ ಯೋಜನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಅನುಮೋದಿಸಿದ್ದಾರೆ.
| ಡಾ. ಕೆ. ಮುರಳೀಧರ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಸದಸ್ಯರ ಹೊಣೆ
- ಜಿಲ್ಲಾ ಮಟ್ಟದಲ್ಲಿ ಡಿಸಿಗಳ ನೇತೃತ್ವದ ಕನ್ನಡ ಅನುಷ್ಠಾನ ಸಮಿತಿಗೆ ಇವರು ಸದಸ್ಯರು
- ಜಿಲ್ಲಾ ಮಟ್ಟದಲ್ಲಿ ಕನ್ನಡ ಅನುಷ್ಠಾನದ ಪರಿಶೀಲನೆ ಇವರ ಹೊಣೆ
- ಕಾಯಕ ವರ್ಷದ ಅನುಷ್ಠಾನದ ಜವಾಬ್ದಾರಿ.
ಕರ್ತವ್ಯಗಳೇನು?
- ಸಾರ್ವಜನಿಕರಲ್ಲಿ ಕನ್ನಡ ಬಳಕೆಯ ಬಗ್ಗೆ ನಿರಂತರ ಅರಿವು ಮೂಡಿಸಬೇಕು, ಪಡೆಯ ಸದಸ್ಯರಿಗೆ ಯಾವುದೇ ಕಚೇರಿಗೆ ಭೇಟಿ ನೀಡುವ ಜವಾಬ್ದಾರಿ ಇರುವುದಿಲ್ಲ.
- ಯಾರನ್ನೂ ಕನ್ನಡದ ಹೆಸರಿನಲ್ಲಿ ಬೆದರಿಸುವಂತಿಲ್ಲ, ಕನ್ನಡದ ಅನುಷ್ಠಾನಕ್ಕೆ ಸ್ವಯಂ ಸೇವಕರ ರೀತಿ ಕೆಲಸ ಮಾಡಬೇಕು.
ಸಾರ್ವಜನಿಕ ಸಂಹಿತೆ ಮುಖ್ಯಾಂಶ
- ಎಲ್ಲೆಡೆ ಕನ್ನಡದಲ್ಲಿ ಮಾತನಾಡಬೇಕು, ಪರಭಾಷಿಕರ ಜತೆಗೂ ಕನ್ನಡದಲ್ಲಿ ವ್ಯವಹರಿಸಬೇಕು, ಅನಗತ್ಯ ಇಂಗ್ಲಿಷ್ ಬಳಕೆಗೆ ಕಡಿವಾಣ ಹಾಕಬೇಕು.
- ಮನೆಯ ಹೆಸರಿನ ಫಲಕ ಕನ್ನಡದಲ್ಲಿರಲಿ. ಮನೆಯಲ್ಲಿ ಯಾವುದೇ ರೀತಿಯ ಬರವಣಿಗೆ ಕನ್ನಡದಲ್ಲಿ ರೂಢಿಸಿಕೊಳ್ಳಿ
- ಪರಭಾಷಿಕರು ಕನ್ನಡ ಕಲಿಯುವಾಗ ಅವರಿಗೆ ಸಹಕರಿಸಿ. ತಪು್ಪ ಕನ್ನಡ ಮಾತನಾಡಿದರೆ ಅವಹೇಳನ ಮಾಡದೇ ತಿದ್ದಿ.
- ನಾವು ಕನ್ನಡ ಬಳಸದಿದ್ದರೆ ಬೇರೆಯವರು ಬಳಸಲು ಸಾಧ್ಯವೇ ಎಂಬ ಮನೋಭಾವ ಬೆಳೆಸಿಕೊಳ್ಳಿ. ಮನೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುವಾಗ ಕನ್ನಡ ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತಕ್ಕೆ ಸ್ಥಾನವಿರಲಿ
- ವಾಹನಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿ
- ವಿಸಿಟಿಂಗ್ ಕಾರ್ಡ್ ಲೆಟರ್ಹೆಡ್ಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯ ಇರಲಿ
- ಅಂಗಡಿ, ಮುಂಗಟ್ಟುಗಳ ಫಲಕ ಕನ್ನಡದಲ್ಲಿರಲಿ
- ಆಸ್ತಿಯ ಕ್ರಮಪತ್ರ ಕನ್ನಡದಲ್ಲಿರುವಂತೆ ವಕೀಲರು, ಮಧ್ಯವರ್ತಿಗಳಿಗೆ ತಿಳಿಸಿ
- ರಾಜ್ಯ ಸರ್ಕಾರದ ಯಾವುದೇ ಇಲಾಖೆಗೆ ನೀಡುವ ಅರ್ಜಿಗಳು ಕನ್ನಡದಲ್ಲಿಯೇ ಇರಲಿ, ಅರ್ಜಿಗಳು ಕನ್ನಡದಲ್ಲಿ ಲಭ್ಯವಿರದಿದ್ದರೆ ಸಂಬಂಧಿಸಿದವರ ಗಮನಕ್ಕೆ ತನ್ನಿ
- ಕನ್ನಡಕ್ಕೆ ಅಪಾಯವಿದೆ ಎನಿಸಿದಾಗ ಇಲಾಖೆಗಳು ಹಾಗೂ ಪತ್ರಿಕೆಗಳಿಗೆ ಬರೆಯಿರಿ
- ಚೆಕ್, ಚಲನ್ ಎಲ್ಲವೂ ಕನ್ನಡದಲ್ಲಿಯೇ ಇರಲಿ. ಕನ್ನಡದಲ್ಲಿ ಇರದಿದ್ದರೆ ಬ್ಯಾಂಕ್ಗಳ ಗಮನಕ್ಕೆ ತನ್ನಿ, ಎಟಿಎಂನಲ್ಲಿಯೂ ಕನ್ನಡ ಇರಬೇಕು
- ರೈಲ್ವೆ, ಅಂಚೆ, ತೆರಿಗೆ, ವಿಮೆ, ದೂರಸಂಪರ್ಕ ಇಲಾಖೆ ಸೇರಿ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹೋದಾಗ ಕನ್ನಡದಲ್ಲೇ ವ್ಯವಹರಿಸಿ, ಕನ್ನಡದ ನಮೂನೆಗಳಿಗೆ ಆಗ್ರಹಿಸಿ. ಇಲ್ಲದಿದ್ದರೆ ತ್ರಿಭಾಷಾ ಸೂತ್ರದ ಉಲ್ಲಂಘನೆ ಎಂದು ದೂರು ಪೆಟ್ಟಿಗೆಯಲ್ಲಿ ದೂರು ದಾಖಲಿಸಿ
- ಬಡಾವಣೆಗಳಲ್ಲಿ ರಸ್ತೆ ಫಲಕಗಳು ಕನ್ನಡದಲ್ಲಿ ಇರದಿದ್ದರೆ ಅಥವಾ ತಪ್ಪಾಗಿದ್ದರೆ ಸಂಬಂಧಿಸಿದವರ ಗಮನಕ್ಕೆ ತನ್ನಿ
- ಜನಪ್ರತಿನಿಧಿಗಳಿಗೆ ನಾಡುನುಡಿ ಸಮಸ್ಯೆ, ರಕ್ಷಣೆಗೆ ಸಂಬಂಧಿಸಿದಂತೆ ಪತ್ರ ಬರೆದು ಗಮನ ಸೆಳೆಯಿರಿ
- ಫ್ಲಿಪ್ಕಾರ್ಟ್, ಅಮೆಜಾನ್, ವಿಮೆ ಮೊದಲಾದ ಸಂಸ್ಥೆಗಳ ಜತೆ ವ್ಯವಹಾರ ಕನ್ನಡದಲ್ಲಿಯೇ ಮಾಡಿ. ಕನ್ನಡದಲ್ಲಿ ಅವಕಾಶ ಇಲ್ಲದಿದ್ದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ
- ಮೊಬೈಲ್ನಲ್ಲಿ ಕನ್ನಡದಲ್ಲಿಯೇ ಹೆಸರು ದಾಖಲಿಸಿಕೊಳ್ಳಿ.
- ಆಮಂತ್ರಣ ಪತ್ರಿಕೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯ ಇರಲಿ. ಅಗತ್ಯ ಇದ್ದರಷ್ಟೇ ಕನ್ನಡದ ಜತೆ ಮತ್ತೊಂದು ಭಾಷೆ ಮುದ್ರಿಸಿ
- ಮದುವೆ, ಮತ್ತಿತರ ಸಮಾರಂಭದಲ್ಲಿ ಸ್ವಾಗತ ಫಲಕ, ವೇದಿಕೆ ಮೇಲೆ ಹಾಕುವ ಫಲಕಗಳು ಕನ್ನಡದಲ್ಲಿಯೇ ಇರಲಿ
- ಮರೆಯದೇ ಕನ್ನಡ ಪತ್ರಿಕೆಗಳನ್ನು ತರಿಸಿ, ಇಂಗ್ಲಿಷ್ ತರಿಸುತ್ತಿದ್ದರೆ ಜತೆಗೊಂದು ಕನ್ನಡ ಪತ್ರಿಕೆಯೂ ಇರಲಿ
- ಹೊರ ರಾಜ್ಯ,ದೇಶಗಳಿಗೆ ಹೋದಾಗ ಕನ್ನಡ ಘೋಷಣೆಗಳಿರುವ ಟೀಶರ್ಟ್ಗಳನ್ನು ಧರಿಸಿ. ಅಲ್ಲಿ ಕನ್ನಡಿಗರಿದ್ದರೆ ಅವರೊಂದಿಗೆ ಸಂಬಂಧ ಬೆಳೆಯುತ್ತದೆ. ಬೇರೆಯವರು ಕುತೂಹಲದಿಂದ ಕನ್ನಡದ ಬಗ್ಗೆ ತಿಳಿಯುತ್ತಾರೆ.
ParagraphShortcodesFormats