ನ್ಯೂಸ್

ತಡರಾತ್ರಿ ಹೊಸದುರ್ಗದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ದುರ್ಮರಣ, ಕೈನಡು ಗ್ರಾಮದಲ್ಲಿ ಮಡುಗಟ್ಟಿದ ಶೋಕ

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕೈನಡು ಗ್ರಾಮದ ಬಳಿ ಟ್ಯಾಂಕರ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಕೈನಡು ಗ್ರಾಮದ ಉಜ್ಜೀರಪ್ಪ(38), ರವಿಕುಮಾರ್(29) ಮತ್ತು ಗಿರೀಶ್(23) ಮೃತ ದುರ್ದೈವಿಗಳು. ನಿನ್ನೆ(ಶನಿವಾರ) ತಡರಾತ್ರಿ ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ಮೂವರು ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ಟ್ಯಾಂಕರ್​ ರೂಪದಲ್ಲಿ ಬಂದ ಜವರಾಯ ಮೂವರ ಪ್ರಾಣ ಹೊತ್ತೊಯ್ದಿದ್ದಾನೆ.

ಮೂವರ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಓರ್ವನ ದೇಹ ನಜ್ಜುಗುಜ್ಜಾಗಿದೆ. ಅಪಘಾತದ ಭೀಕರತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೈನಡು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.(ದಿಗ್ವಿಜಯ ನ್ಯೂಸ್​, ಚಿತ್ರದುರ್ಗ)