ನ್ಯೂಸ್

‘ಟಾಕ್ಸಿಕ್’ನಲ್ಲಿ ತನಿಕೆಲ್ಲ ಭರಣಿ?: ನಟ ಯಶ್ ಜತೆ ಫೋಟೋ ಹಂಚಿಕೊಂಡ ತೆಲುಗು ಹಿರಿಯ ನಟ


ಬೆಂಗಳೂರು: ‘ಕೆಜಿಎಫ್’ ಸರಣಿ ಯಶಸ್ಸಿನ ಬಳಿಕ ಯಶ್ ಅಭಿನಯಿಸುತ್ತಿರುವ ಸಿನಿಮಾ ‘ಟಾಕ್ಸಿಕ್’. 70, 80ರ ದಶಕದ ಡ್ರಗ್ ಮಾಫಿಯಾ ಹಿನ್ನೆಲೆಯ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಕಂಡಿದ್ದು, ಬೆಂಗಳೂರಿನ ಎಚ್‌ಎಂಟಿ ಕೈಗಾರಿಕಾ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಕಲಾವಿದರು ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ಶ್ರುತಿ ಹಾಸನ್, ಹುಮಾ ಖುರೇಷಿ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಇದೀಗ ಮತ್ತೊಬ್ಬ ತೆಲುಗು ಹಿರಿಯ ನಟ ತನಿಕೆಲ್ಲ ಭರಣಿ ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಯಶ್ ಜತೆಗಿರುವ ಫೋಟೋ ಹಂಚಿಕೊಂಡಿರುವ ಅವರು ಈ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳಿನ ಅಂದಾಜು 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಿರಿಯ ನಟ ತನಿಕೆಲ್ಲ ಭರಣಿ ಅಭಿನಯಿಸಿದ್ದಾರೆ. ನಟನೆ ಜತೆಗೆ ನಿರ್ದೇಶನ, ಬರವಣಿಗೆ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ. ತನಿಕೆಲ್ಲ ಭರಣಿ ಈಗಾಗಲೇ ಕನ್ನಡದ ‘ನಾಗದೇವತೆ’, ಯೋಗರಾಜ್ ಭಟ್ ನಿರ್ದೇಶನದ ಶಿವರಾಜಕುಮಾರ್, ಪ್ರಭುದೇವ ನಟಿಸಿದ್ದ ‘ಕರಟಕ ದಮನಕ’ ಸೇರಿ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ನಲ್ಲಿ ಅವರು ನಟಿಸುತ್ತಿರುವುದು ನಿಜವಾದಲ್ಲಿ, ಇದು ಅವರು ನಟಿಸಲಿರುವ ನಾಲ್ಕನೇ ಕನ್ನಡ ಚಿತ್ರವಾಗಲಿದೆ.