ನ್ಯೂಸ್

ರಾಜ್ಯದ ಎಂಪಿ ಭೇಟಿಗೆ ಕಾಲಾವಕಾಶ ನೀಡದ ತಮಿಳುನಾಡು ಸಿಎಂ !

ಬೆಂಗಳೂರು: ಕಾವೇರಿ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜತೆಗೆ ಚರ್ಚಿಸಲು ಚೆನ್ನೈಗೆ ಹೋಗಿದ್ದ ರಾಜ್ಯದ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯ ಬರಿಗೈಲಿ ಮರಳಿದ್ದಾರೆ. ಈ ವಿಷಯವನ್ನು ಸ್ವತಃ ಲಹರ್ ಸಿಂಗ್ ಸಿರೋಯ ಅವರೇ ಗುರುವಾರ ಬಹಿರಂಗಪಡಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ರಾಯಭಾರಿ ಅಥವಾ ಯಾರದೇ ಪ್ರತಿನಿಧಿಯಾಗಿ ಹೋಗಿದ್ದಿಲ್ಲ. ಕರ್ನಾಟಕದ ಬರ ಪರಿಸ್ಥಿತಿ, ನೀರಿನ ಕೊರತೆ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಭೇಟಿಯಾಗಲು ಬಯಸಿದ್ದೆ.

ಕಾವೇರಿ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿಸದೆ ಮಾನವೀಯ ನೆಲೆಯಲ್ಲಿ ಪರಿಗಣಿಸಲು ಮನವಿ ಮಾಡಿಕೊಳ್ಳಬೇಕೆಂದಿದ್ದೆ. ಎರಡು ದಿನ ಚೆನ್ನೈನಲ್ಲಿ ಕಾದರೂ ತಮಿಳುನಾಡು ಸಿಎಂ ಭೇಟಿಗೆ ಕಾಲಾವಕಾಶ ನೀಡದಿರುವುದು ದುರದೃಷ್ಟಕರವೆಂದು ಸಿರೋಯ ಬೇಸರ ವ್ಯಕ್ತಪಡಿಸಿದರು.

ಮನವೊಲಿಸಲು ಸಲಹೆ

ಕರ್ನಾಟಕ, ತಮಿಳುನಾಡಿನ ಮಧ್ಯೆ ವ್ಯವಹಾರಿಕ ಜತೆಗೆ ಬದುಕಿನ ಬಾಂಧವ್ಯವಿದೆ. ರಾಜ್ಯದಲ್ಲಿನ ವಾಸ್ತವ ಸ್ಥಿತಿ ತಿಳಿದುಕೊಳ್ಳುವುದು ಮಾನವೀಯತೆ ದೃಷ್ಟಿಯಿಂದ ಮುಖ್ಯವಾಗಿದೆ. ಉತ್ತಮವಾಗಿ ಮಳೆ ಸುರಿದಿದ್ದರೆ ನೀರಿನ ಅಭಾವವೇ ಉದ್ಭವಿಸುವುದಿಲ್ಲ ಎಂಬುದನ್ನು ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜಕೀಯರಹಿತವಾದ ಸದ್ಭಾವನೆಯಿಂದ ಕೂಡಿದ ಪ್ರಯತ್ನಕ್ಕೆ ಸ್ಟಾಲಿನ್ ಸ್ಪಂದಿಸಲಿಲ್ಲ. ಆದರೆ ಡಿಎಂಕೆ ಸಂಸದರು ಮತ್ತು ತಮಿಳುನಾಡು ನಾಯಕರೊಂದಿಗೆ ಚರ್ಚಿಸಿದ್ದು, ನಾನು ನೀಡಿದ ಸಲಹೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಜತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇರವಾಗಿ ಮಾತುಕತೆ ಮನವೊಲಿಸುವುದು ಸೂಕ್ತ. ಕಾವೇರಿ ಬಿಕ್ಕಟ್ಟಿಗೆ ಪರಿಹಾರ ಲಭಿಸುವ ವಿಶ್ವಾಸವಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ.

ಕೋರ್ಟ್ ಹೊರಗೆ ಸಮಸ್ಯೆ ಬಗೆಹರಿಸಲು ಉಭಯ ರಾಜ್ಯಗಳ ಸಿಎಂಗಳು ಪ್ರಯತ್ನಿಸಬೇಕು. ಈ ಬಿಕ್ಕಟ್ಟಿನಿಂದ ಪಾರಾಗುವ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಲಹರ್ ಸಿಂಗ್ ಸಿರೋಯ ಸಲಹೆ ನೀಡಿದರು.