ನ್ಯೂಸ್

ತಮಿಳುನಾಡಿಗೆ ಹೆಚ್ಚಿದ ಆತಂಕ! ಭಾರೀ ಮಳೆಯಿಂದ ಎದುರಾಯ್ತು ಸಂಕಷ್ಟ | Heavy Rain

ತಮಿಳುನಾಡು: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯ ಹಿನ್ನಲೆ ಜಲಾಶಯಗಳು ಗರಿಷ್ಠ ಮಟ್ಟ ತಲುಪಿವೆ. ಜಲಾಶಯಗಳು ಮೈದುಂಬಿ ಹರಿಯುವ ಮುನ್ಸೂಚನೆ ಸಿಕ್ಕಿರುವ ಬೆನ್ನಲ್ಲೇ ಜನರಲ್ಲಿ ಎಚ್ಚರಿಕೆ ಮೂಡಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಸೂಚಿಸಿದೆ.

ಪೂಂಡಿ ಜಲಾಶಯದಿಂದ ಕೊಸಸ್ಥಲೈಯಾರ್ ನದಿಗೆ 1,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ. ಇಂದು ಬೆಳಗ್ಗೆ, ಪೂಂಡಿ ಜಲಾಶಯದ ನೀರಿನ ಮಟ್ಟ 34.05 ಅಡಿಗಳಷ್ಟಿತ್ತು, ಅದರ ಪೂರ್ಣ ಸಾಮರ್ಥ್ಯಕ್ಕಿಂತ ಕೇವಲ ಒಂದು ಅಡಿಯಷ್ಟೇ ಕಡಿಮೆಯಿದೆ. ಹೆಚ್ಚುವರಿಯಾಗಿ, ತಿರುವಣ್ಣಾಮಲೈನ ಸಾತನೂರ್ ಅಣೆಕಟ್ಟಿನಿಂದ 13,000 ಕ್ಯೂಸೆಕ್ ಮತ್ತು ಚೆಂಬರಂಬಾಕ್ಕಂ ಅಣೆಕಟ್ಟಿನಿಂದ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ತಗ್ಗು ಪ್ರದೇಶದಲ್ಲಿ ವಾಸವಿರುವ ಜನರು ಜಾಗರೂಕರಾಗಿರುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

ನಿನ್ನೆ ರಾತ್ರಿಯಿಡೀ ಸುರಿದ ಮಳೆಯು ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳನ್ನು ಬೆಂಬಿಡದೆ ಕಾಡಿದೆ. ಧಾರಕಾರ ಮಳೆಯ ಹಿನ್ನಲೆ ಒಂಬತ್ತು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನ ನೆರ್ಕುಂದ್ರಂ ಮತ್ತು ಮೀನಂಬಾಕ್ಕಂನಲ್ಲಿ ಕ್ರಮವಾಗಿ 10 ಮತ್ತು 8 ಸೆಂ.ಮೀ ಮಳೆ ದಾಖಲಾಗಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).