ನ್ಯೂಸ್

ಮೃತ ವ್ಯಕ್ತಿಯ ಅಂಗಾಂಗ ದಾನ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ತಮಿಳುನಾಡು: ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಸರ್ಕಾರಿ ಉದ್ಯೋಗಿಯೊಬ್ಬರು ಸಾಯುವ ಮುನ್ನ ತಮ್ಮ ದೇಹದ ಬಹು ಅಂಗಾಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಿದ ಘಟನೆ ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ವರದಿಯಾಗಿದೆ.

ಮಂಗಳವಾರ (ಸೆ.26) ತೇಣಿ ಜಿಲ್ಲೆಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನ ಮಾಡಿದ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.

ವರದಿಯ ಪ್ರಕಾರ, ಮೃತಪಟ್ಟ ಸರ್ಕಾರಿ ನೌಕರ ವಡಿವೇಲು ಎಂದು ಹೇಳಲಾಗಿದ್ದು, ಕಳೆದ ಶನಿವಾರ (ಸೆ.23) ತಮ್ಮ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಹಸುವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್​ನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದ ಪರಿಣಾಮ ವಡಿವೇಲು ತಲೆಗೆ ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆಂದು ಮೂರು ಆಸ್ಪತ್ರೆಗಳಿಗೆ ಕರೆದೊಯ್ದ ಬಳಿಕ, ಭಾನುವಾರ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂಬುದನ್ನು ದೃಢಪಡಿಸಿದ್ದಾರೆ.

ವೈದ್ಯರು ಈ ಸಂಗತಿಯನ್ನು ಘೋಷಿಸುತ್ತಿದ್ದಂತೆ ಅವರ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ವಡಿವೇಲು ಅವರ ಅಂಗಾಗಳನ್ನು ಇತರ ರೋಗಿಗಳಿಗೆ ದಾನ ಮಾಡಲಾಗಿದೆ. ದೇಹದ ಕಿಡ್ನಿ, ಯಕೃತ್ತು, ಕಣ್ಣುಗುಡ್ಡೆ, ಚರ್ಮ ಮುಂತಾದ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. 43 ವರ್ಷದ ವಡಿವೇಲು ಥೇಣಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).