ನವದೆಹಲಿ: ನಟನಾಗಿ ಎಷ್ಟೇ ಬ್ಯುಸಿ ಇದ್ದರೂ ತಲೈವಾ ರಜನಿಕಾಂತ್ ಅವಕಾಶ ಸಿಕ್ಕಾಗಲೆಲ್ಲ ಹಿಮಾಲಯಕ್ಕೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಮನಶ್ಶಾಂತಿಗಾಗಿ ಅಲ್ಲಿ ಕೆಲವು ದಿನಗಳನ್ನು ಧ್ಯಾನದಲ್ಲಿ ಕಳೆಯುತ್ತಾರೆ.
ರಜನಿಕಾಂತ್ ಮೇ 29ರಂದು ಉತ್ತರಾಖಂಡಕ್ಕೆ ತೆರಳಿ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ಅವರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ರಜನಿಕಾಂತ್ ಕೇದಾರನಾಥದಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದೇ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ರಜನಿಕಾಂತ್ ಅವರನ್ನು ಸನ್ಮಾನಿಸಿದರು. ಪೊಲೀಸರು ಎಕ್ಸ್ ನ ತಮ್ಮ ಅಧಿಕೃತ ಹ್ಯಾಂಡಲ್ ನಲ್ಲಿ ರಜನಿಕಾಂತ್ ಅವರ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದು, ಪೋಟೋಗಳನ್ನು ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.
ಶ್ರೀ ಬದರಿನಾಥ ದರ್ಶನಕ್ಕಾಗಿ ದೇವಭೂಮಿಗೆ ಆಗಮಿಸಿದ ರಜನಿಕಾಂತ್ ಜಿ ಅವರಿಗೆ ಸ್ವಾಗತ ಮತ್ತು ಅಭಿನಂದನೆಗಳು ಎಂದು ಪೊಲೀಸರು ಪೋಸ್ಟ್ನಲ್ಲಿ ಹಾಕಿಕೊಂಡಿದ್ದರೆ, ಶ್ರೀ ಬದರಿನಾಥ ಧಾಮದ ದರ್ಶನದಿಂದ ಪುಳಕಿತನಾಗಿದ್ದೇನೆ ಎಂದು ರಜನಿಕಾಮತ್ ತಿಳಿಸಿದರು. ಅವರು ಲೋಕಕಲ್ಯಾಣ ಮತ್ತು ದೇಶದ ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ.