ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕಳ್ಳಮಾರ್ಗದಲ್ಲಿ ಚಿನ್ನ ಸಾಗಣೆ ಮಾಡುವವರ ಮೇಲೆ ನಿಗಾ ವಹಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ದಿನಕ್ಕೆ 17ರಿಂದ 20 ಪ್ರಕರಣಗಳನ್ನು ದಾಖಲಿಸಿ 13ರಿಂದ 15 ಕೆ.ಜಿ. ಚಿನ್ನ ಜಪ್ತಿ ಮಾಡುತ್ತಿದ್ದಾರೆ. ಡಿಆರ್‌ಐ ಇಲಾಖೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಈ ದಂಧೆ ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಡಿಆರ್‌ಐ ಅಧಿಕಾರಿಗಳು 6,425 ಪ್ರಕರಣ ಪತ್ತೆಹಚ್ಚಿ 4,869 ಕೆ.ಜಿ. ಚಿನ್ನ ಜಪ್ತಿ ಮಾಡಿ, 1,922 ಮಂದಿಯನ್ನು ಬಂಧಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಭಾರತಕ್ಕೆ ಮೂರು ಮಾರ್ಗದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಆಗುತ್ತಿದೆ. ಅದರಲ್ಲಿಯೂ ಜಲಸಾರಿಗೆಯಲ್ಲಿ ಹಡಗುಗಳ ಮೂಲಕ ಶೇ.55 ಸಾಗಣೆಯಾಗುತ್ತಿದೆ. ದುಬೈನಲ್ಲಿ ಕಡಿಮೆ ಬೆಲೆಗೆ ಚಿನ್ನ ಸಿಗುವುದರಿಂದ ಅಲ್ಲಿಂದ ಶ್ರೀಲಂಕಾಕ್ಕೆ ತಂದು ಮೀನುಗಾರರ ಸಹಾಯದಿಂದ ಕರಾವಳಿ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ತಲುಪಿಸುತ್ತಿದ್ದಾರೆ. ನಂತರ ವಿಮಾನ ಮಾರ್ಗದಲ್ಲಿ ಶೇ.36 ಚಿನ್ನ ಕಳ್ಳ ಸಾಗಣೆ ಆಗುತ್ತಿದೆ.
ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾದ ದೇಶಗಳಲ್ಲಿ ಸ್ಮಗ್ಲರ್ಸ್ ಹೆಚ್ಚಿದ್ದಾರೆ. ಇತ್ತೀಚೆಗೆ ಆಫ್ರಿಕನ್ ವಿಮಾನ ನಿಲ್ದಾಣ ಮೂಲಕ ನೈರೋಬಿ ಮತ್ತು ಆಡಿಸ್ ಅಬಾಬಾ ಮತ್ತು ಕೇಂದ್ರ ಏಷ್ಯನ್ ವಿಮಾನ ನಿಲ್ದಾಣ ಅಂದರೆ ತಾಷ್ಕೆಂಟ್ ಸೇರಿದೆ. ಬಟ್ಟೆಗಳಲ್ಲಿ ಚಿನ್ನವನ್ನು ಬಚ್ಚಿಟ್ಟು ಮಾರ್ಗಮಧ್ಯೆ ಬಿಚ್ಚಿಡುವುದು ಮತ್ತು ಧರಿಸಿಕೊಂಡು ಬರುವುದು ಹಾಗೂ ಯಂತ್ರೋಪಕರಣ, ಗೃಹೋಪಯೋಗಿ ವಸ್ತುಗಳ ಸೇರಿ ಸರಕು ಸಾಗಾಣಿಯಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದಾರೆ.
ರಸ್ತೆ ಮಾರ್ಗವಾಗಿ ಶೇ.9 ಚಿನ್ನ ಕಳ್ಳ ಸಾಗಾಣಿಕೆಯಾಗುತ್ತಿದೆ. ಭಾರತದ ಜತೆಗೆ ಗಡಿಹಂಚಿಕೊಂಡಿರುವ ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳದಿಂದ ದಂಧೆಕೋರರು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಮ್ ಮೂಲಕ ದೇಶದ ಒಳಗೆ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ಡಿಆರ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹವಾಲಾ, ಟೆರರಿಸ್ಟ್ ವಜ್ರ
ಚಿನ್ನ ಕಳ್ಳ ಸಾಗಾಣಿಕೆಯಂತೆ ಹೆಚ್ಚಾಗಿ ಬೆಳ್ಳಿ ಮತ್ತು ವಜ್ರ ಸ್ಮಗ್ಲಿಂಗ್ ಹೆಚ್ಚಾಗಿ ನಡೆಯುವುದಿಲ್ಲ. ಹವಾಲಾ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ವಜ್ರ ಸಾಗಾಟ ಮಾಡುವುದು ತನಿಖೆಯಿಂದ ಬೆಳಕಿಗೆ ಬಂದಿದೆ. 2024ರ ನವೆಂಬರ್ 10ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಇಬ್ಬರನ್ನು ಬಂಧಿಸಿ 8,053 ಕ್ಯಾರೆಟ್‌ನ 7.77 ಕೋಟಿ ರೂ. ಮೌಲ್ಯದ ವಜ್ರ ಜಪ್ತಿ ಮಾಡಲಾಗಿತ್ತು. ಅದೇ ದಿನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿ 5,569 ಕ್ಯಾರೆಟ್‌ನ 6.03 ಕೋಟಿ ರೂ. ಮೌಲ್ಯದ ವಜ್ರ ಜಪ್ತಿ ಮಾಡಲಾಗಿತ್ತು. ಬೆಳ್ಳಿಗೆ ಮೌಲ್ಯ ಕಡಿಮೆ ಇರುವ ಕಾರಣಕ್ಕೆ ಅಕ್ರಮ ಚಟುವಟಿಕೆಗೆ ಬಳಸುತ್ತಿಲ್ಲ. 2023-24ನೇ ಸಾಲಿನಲ್ಲಿ 6 ಬೆಳ್ಳಿ ಕಳ್ಳ ಸಾಗಣೆ ಕೇಸ್ ದಾಖಲಾಗಿದ್ದು, 147 ಕೆ.ಜಿ. ಜಪ್ತಿ ಮಾಡಲಾಗಿದೆ.
5 ವರ್ಷಗಳಲ್ಲಿ ಚಿನ್ನದ ಆಮದು (ಮೆಟ್ರಿಕ್ ಟನ್)
ವರ್ಷ ಆಮದು
-------------------------
2023-24 447.48
2022-23 448.62
2021-22 525.82
2020-21 391.29
2019-20 529.85