ನ್ಯೂಸ್

ಲೈಂಗಿಕ ಕಿರುಕುಳ ಸಹಿಸದೇ ವಿದ್ಯಾರ್ಥಿನಿ ಸಾವು ಪ್ರಕರಣ: ಆರೋಪಿ ಶಿಕ್ಷಕನ ಪತ್ನಿಯೂ ಅರೆಸ್ಟ್​!

ಕೊಯಮತ್ತೂರು: ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯ ಶಿಕ್ಷಕ ಮಾತ್ರವಲ್ಲದೆ, ಆತನ ಪತ್ನಿಯನ್ನು ಸಹ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಆರೋಪಿ ಶಿಕ್ಷಕನ್ನು ಮಿಥುನ್​ ಚಕ್ರವರ್ತಿ (35) ಎಂದು ಗುರುತಿಸಲಾಗಿದೆ. ಆತನ ಪತ್ನಿ ಅರ್ಚನಾಳನ್ನು ಸಹ (32) ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ಆರ್​ಎಸ್​ ಪುರಂನಲ್ಲಿ ಖಾಸಗಿ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಆರೋಪಿ ಮಿಥುನ್​ ಚಕ್ರವರ್ತಿಯ ಲೈಂಗಿಕ ದೌರ್ಜನ್ಯ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ 2021ರ ನವೆಂಬರ್​ 12ರಂದು ನಡೆದಿತ್ತು. ಈ ಪ್ರಕರಣದಲ್ಲಿ ಮೊದಲು ಮಿಥುನ್​ ಬಂಧನವಾಗಿತ್ತು. ಇದೀಗ ಆಕೆಯ ಪತ್ನಿಯ ಬಂಧನವೂ ಆಗಿದೆ.

ಈ ಪ್ರಕರಣದಲ್ಲಿ ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕೊಯಮತ್ತೂರಿನ ಪೊಕ್ಸೊ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಮಿಥುನ್​ ಪತ್ನಿ ಅರ್ಚನಾಳನ್ನು ನಿನ್ನೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಅರ್ಚನಾ ಸಹ ತನ್ನ ಗಂಡ ಮಿಥುನ್​ ಶಿಕ್ಷಕನಾಗಿದ್ದ ಕಾಲೇಜಿನಲ್ಲೇ ಶಿಕ್ಷಕಿಯಾಗಿದ್ದಳು. ಮಿಥುನ್​, ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಅರ್ಚನಾ ಬಳಿ ದೂರು ನೀಡಿದ್ದಳು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದೇ ಅರ್ಚನಾ ನಿರ್ಲಕ್ಷಿಸಿದ್ದಳು. ಇದರ ಪರಿಣಾಮ ವಿದ್ಯಾರ್ಥಿನಿ ಕಿರುಕುಳ ತಾಳಲಾರದೇ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಂಡಳು. (ಏಜೆನ್ಸೀಸ್​)