ಚೆನ್ನೈ: ನಾವು ಕೆಲವೊಮ್ಮ ಸಣ್ಣ ವಿಚಾರವನ್ನು ದೊಡ್ಡ ರಂಪ ಮಾಡುವುದು ಬೇಡ ಟೈಮ್ ವೇಸ್ಟ್ ಆಗುತ್ತದೆ ಎಂದು ಹಗುರವಾಗಿ ಪರಿಗಣಿಸಿ ಬಿಟ್ಟಿಬಿಡುತ್ತೇವೆ. ಆದರೆ, ಕೆಲವರು ತಪ್ಪು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನು ಸರಿಪಡಿಸುವವರೆಗೂ ಸುಮ್ಮನಾಗುವುದಿಲ್ಲ. ಈ ರೀತಿಯ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
ಅದೇ ರೀತಿ ನಾವು ಹೋಟೆಲ್ಗಳಿಗೆ ಹೋಗಿ ಮೆನೆಗೆ ಪಾರ್ಸೆಲ್ ತೆಗೆದುಕೊಂಡಾಗ ಆರ್ಡರ್ ಮಾಡಿರುವ ಅಷ್ಟು ಐಟಮ್ಗಳನ್ನು ಮಿಸ್ ಮಾಡದೆ ಸರಿಯಾಗಿ ಪ್ಯಾಕ್ ಮಾಡಿದ್ದಾರಾ ಎಂಬುದನ್ನು ನೋಡಿಕೊಳ್ಳುತ್ತೇವೆ. ಆದರೆ ಖರೀದಿಸಿದ ಊಟದ ಪಾರ್ಸೆಲ್‍ನಲ್ಲಿ ಉಪ್ಪಿನಕಾಯಿ ಹಾಕದ ಕಾರಣ ಹೋಟೆಲ್ ಮಾಲೀಕರು ಗ್ರಾಹಕರಿಗೆ 35,000 ಸಾವಿರ ಮೊತ್ತದ ದಂಡ ಪಾವತಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿಯ ಆರೋಗ್ಯಸ್ವಾಮಿ ಎಂಬ ವ್ಯಕ್ತಿ ನವೆಂಬರ್ 28, 2022ರಂದು ತನ್ನ ಸಂಬಂಧಿಯ ಪುಣ್ಯತಿಥಿಯಂದು ವೃದ್ಧಾಶ್ರಮಕ್ಕೆ ನೀಡಲು ಆಹಾರ ಪ್ಯಾಕೆಟ್‍ಗಳನ್ನು ಪಾರ್ಸೆಲ್‍ಗಳಾಗಿ ಖರೀದಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ವಿಲ್ಲುಪುರಂನ ಬಾಲಮುರುಗನ್ ರೆಸ್ಟೋರೆಂಟ್‍ಗೆ ತೆರಳಿ ಊಟದ ದರ ವಿಚಾರಿಸಿದ್ದರು. ಹೋಟೆಲ್ ಮಾಲೀಕರು ಊಟಕ್ಕೆ 70 ರೂಪಾಯಿ, ಪ್ರತಿ ಪಾರ್ಸೆಲ್ ಊಟಕ್ಕೆ 80 ರೂಪಾಯಿ ಎಂದು ಮಾಹಿತಿ ನೀಡಿದ್ದರು. ಪಾರ್ಸೆಲ್‍ನಲ್ಲಿ 11 ರೀತಿಯ ಭಕ್ಷ್ಯಗಳು ಇರುತ್ತವೆ ಎಂದೂ ಅವರಿಗೆ ತಿಳಿಸಿದ್ದರು.
ಇದನ್ನೂ ಓದಿ: ಇಂಜಿನ್ ಮಾತ್ರ ಬದಲಾಗಿದೆ ಬೋಗಿಗಳಲ್ಲ; ಸರಣಿ ಆರಂಭಕ್ಕೂ ಮುನ್ನ ನೂತನ ನಾಯಕ ಸೂರ್ಯಕುಮಾರ್ ಹೇಳಿಕೆ ವೈರಲ್
ಅದರಂತೆ 25 ಊಟದ ಪ್ಯಾಕ್‍ಗಳನ್ನು ಆರ್ಡರ್ ಮಾಡಿದ್ದರು. 2000 ರೂ.ಗಳನ್ನು ಪಾವತಿಸಿ ಮಾರನೇ ದಿನ ಆಶ್ರಮಕ್ಕೆ ತಲುಪಿಸಿದ್ದಾರೆ. ಬಿಲ್ ಕೇಳಿದಾಗ, ಅಂಗಡಿಯವರು ಅದನ್ನು ಕಾಗದದಲ್ಲಿ ಬರೆದು ನೀಡಿದರು. ಆದರೆ ವೃದ್ಧಾಶ್ರಮದಲ್ಲಿ ಪಾರ್ಸೆಲ್‍ಗಳನ್ನು ತಲುಪಿಸುವಾಗ, ಊಟದಲ್ಲಿ ಉಪ್ಪಿನಕಾಯಿ ಇಲ್ಲದಿರುವುದನ್ನು ನೋಡಿದ್ದಾರೆ. ತಮಗೆ ನೀಡಿದ ಪಾರ್ಸೆಲ್‍ನಲ್ಲಿ ಉಪ್ಪಿನಕಾಯಿ ನೀಡಿಲ್ಲ ಎಂದು ಮಾಲೀಕರ ಬಳಿ ವಿಚಾರಿಸಿದ್ದಾರೆ.
ಗ್ರಾಹಕರು ಕೇಳಿದಾಗ ಉಡಾಫೆಯಿಂದ ಮಾಲೀಕ ಉತ್ತರಿಸಿದ್ದು, ಗ್ರಾಹಕರ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಉಪ್ಪಿನಕಾಯಿಗೆ ಚಾರ್ಜ್ ಮಾಡಿರುವ ಹಣವನ್ನು ವಾಪಸ್ ಪಾವತಿಸುವಂತೆ ಗ್ರಾಹಕ ಕೇಳಿದ್ದು, ಇದಕ್ಕೆ ಮಾಲೀಕ ಒಪ್ಪಿಲ್ಲ. ಈ ವಿಚಾರವಾಗಿ ಮಾಲೀಕ ಹಾಗೂ ಗ್ರಾಹಕನಿಗೆ ಗಲಾಟೆಯಾಗಿದ್ದು, ಆರೊಗ್ಯಸ್ವಾಮಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಾಲಯವು ಹೋಟೆಲ್ ಮಾಲೀಕನಿಗೆ ದಂಡ ಹಾಕಿದೆ.
ವ್ಯಾಜ್ಯ ವೆಚ್ಚಕ್ಕಾಗಿ 5,000 ರೂ., ಉಪ್ಪಿನಕಾಯಿಗೆ 30 ಸಾವಿರ ರೂ. ಪರಿಹಾರದ ಮೊತ್ತವನ್ನು ಪಾವತಿಸಲು ಹೋಟೆಲ್ ಮಾಲೀಕರಿಗೆ ಆದೇಶಿಸಿದೆ. ಇದನ್ನು ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ ತಿಂಗಳಿಗೆ ಶೇಕಡಾ 9ರಷ್ಟು ಹೆಚ್ಚುವರಿ ಬಡ್ಡಿ ದಂಡ ವಿಧಿಸಲಾಗುವುದು ಎಂದು ಕೋರ್ಟ್ ಹೋಟೆಲ್ ಮಾಲೀಕನಿಗೆ ಎಚ್ಚರಿಸಿದೆ. ಈ ಸುದ್ದಿ ಹೋಟೆಲ್ ನಡೆಸುವವರಿಗೆ ಒಂದು ಎಚ್ಚರಿಕೆಯ ಪಾಠವಾಗಿದೆ.