ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ವಿರುದ್ಧ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಣಯವನ್ನು ತಮಿಳುನಾಡು ಸರ್ಕಾರ ಖಂಡಿಸಿದೆ.
ಅಂತರರಾಜ್ಯ ನದಿ ನೀರು ಬಿಕ್ಕಟ್ಟು ಪರಿಹಾರಕ್ಕಾಗಿ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ನಿರ್ಧಾರಕ್ಕಾಗಿ ಜುಲೈ 16 (ಮಂಗಳವಾರ) ಚೆನ್ನೈನಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿನಿತ್ಯ 8 ಕ್ಯುಸೆಕ್ ನೀರು ಹರಿಸಲು ತೀರ್ಮಾನ ಕೈಗೊಂಡ ಮರುದಿನವೇ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಜುಲೈ 31ರ ವರೆಗೆ ನಿತ್ಯ 8 ಕ್ಯುಸೆಕ್ ನೀರು ಹರಿಸಲು, ಮಳೆ ಕಡಿಮೆಯಾದ್ರೆ, ಅದಕ್ಕಿಂತಲೂ ಕಡಿಮೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.
ಜುಲೈ 15ರ ಪ್ರಕಾರ ಕರ್ನಾಟಕದ ನಾಲ್ಕು ಜಲಾಯಶಗಳಲ್ಲಿ 75.586 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ. ಆದರೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಕೇವಲ 13.808 ಟಿಎಂಸಿ ಅಡಿ ನೀರಿದೆ ಎಂದು ಅವರು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.