ರುಕ್ಮಿಣಿ ರಾಧಾಕೃಷ್ಣ 
ನ್ಯೂಸ್

Rukmini Radhakrishna - ಕನ್ನಡದಲ್ಲಿ ತಮಿಳು, ತಮಿಳಿನಲ್ಲಿ ಕನ್ನಡ!

Rukmini Radhakrishna -
ಇಂಗ್ಲೀಷ್​ ಸೇರಿ ಬೇರೆ ಭಾಷೆಗಳ ಪದಗಳನ್ನು ಶೀರ್ಷಿಕೆಯಲ್ಲಿ ಬಳಸುವುದು ಸಾಮಾನ್ಯ. ಕೆಲವೊಮ್ಮೆ ಪಾತ್ರಗಳ ನೇಟಿವಿಟಿಗೆ ಅನುಗುಣವಾಗಿ ಬೇರೆ ಭಾಷೆಗಳಲ್ಲೇ ಡೈಲಾಗ್ಸ್​ ಕೂಡ ಇರುತ್ತವೆ. ಆದರೆ, ಹಾಡುಗಳಲ್ಲಿ ಕೆಲವೊಮ್ಮೆ ಬೇರೆ ಭಾಷೆಯ ಪದಗಳನ್ನು ಅಲ್ಲಲ್ಲಿ ಬಳಸಿರುವುದು ಬಿಟ್ಟರೆ, ಪರಭಾಷೆಯನ್ನು ಬಳಸಿರುವುದು ತೀರಾ ಅಪರೂಪ. ಅಂಥದ್ದೇ ಒಂದು ಪ್ರಯೋಗ ಪ್ರಾಣ್​ ಸುವರ್ಣ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವ "ರುಕ್ಮಿಣಿ ರಾಧಾಕೃಷ್ಣ' ಚಿತ್ರದಲ್ಲಿ ನಡೆದಿದೆ. ಸುನಾದ್​ ಗೌತಮ್​ ಸಂಗೀತದಲ್ಲಿ, ಕೆ.ಕಲ್ಯಾಣ್​ ಈ ಪ್ರಯೋಗ ಮಾಡಿದ್ದು, ನಿನಾದ ನಾಯಕ್​, ಸಂಜನಾ ಪೈ ಧ್ವನಿಯಾಗಿದ್ದಾರೆ. "ರಾಧೇಕ್ಕುಮ್​ ಕಣ್ಣನುಕ್ಕುಂ' ಎಂದು ಸಾಗುವ ಈ ಹಾಡಿನಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳನ್ನು ಸಮನಾಗಿ ಬಳಸಲಾಗಿದೆ. "ಮೆಜೆಸ್ಟಿಕ್​ 2' ನಟ ಭರತ್​ ಕುಮಾರ್​, ಮೋಕ್ಷಿತಾ ಪೈ ಮತ್ತು ರಿಯಾ ಸಚ್​ದೇವ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತ್ರಿಕೋನ ಪ್ರೇಮಕಥೆಯಾಗಿದ್ದು, ಇತ್ತೀಚೆಗಷ್ಟೆ ಈ ರೊಮ್ಯಾಂಟಿಕ್​ ಹಾಡನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಕೆ. ಕಲ್ಯಾಣ್​, "ಈ ಹಿಂದೆ ತಮಿಳು ಚಿತ್ರವೊಂದರ ಹಾಡಿಗೆ ಕನ್ನಡದಲ್ಲಿ ಕೆಲ ಸಾಲುಗಳನ್ನು ಬರೆದಿದ್ದೆ. ಈ ಚಿತ್ರದ ನಾಯಕಿಗೆ ತಮಿಳು ಹಿನ್ನೆಲೆಯಿರುವ ಕಾರಣ, ಇದೇ ಮೊದಲ ಬಾರಿಗೆ ತಮಿಳಿನಲ್ಲಿ ಸಾಲು ಬರೆದಿದ್ದೇನೆ' ಎಂದರು. ನಾಯಕ ಭರತ್​ ಕುಮಾರ್​, "ರುಕ್ಮಿಣಿಗೂ ಕೃಷ್ಣನಿಗೂ ಮಧ್ಯೆ ಇರುವ ಆತ್ಮವೇ ರಾಧಾ. ಕುಂಭಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ' ಎಂದರು. ಈಗಾಗಲೇ ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಜತೆಗೆ ಇನ್ನೊಂದು ಹಾಡು ಮಾತ್ರ ಬಾಕಿಯಿದೆ.