ಜಿಕೆ ವಿಷ್ಣುಗೆ ಕಾರು ಗಿಫ್ಟ್​ ನೀಡಿದ ಸೂರ್ಯ 
ನ್ಯೂಸ್

ಹೃದಯವಂತ ಸೂರ್ಯ : ‘ಕರುಪ್ಪು’ ಸಕ್ಸಸ್ ಬೆನ್ನಲ್ಲೇ ಛಾಯಾಗ್ರಾಹಕ ಜಿ.ಕೆ.ವಿಷ್ಣುಗೆ ಕಾರು ಗಿಫ್ಟ್​

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ಸಕ್ಸಸ್​ ಬೆನ್ನಲ್ಲೇ ಹೃದಯವಂತಿಕೆ ಮೆರೆದ ಸೂರ್ಯ
  • 28 ಲಕ್ಷ ರೂ. ಮೌಲ್ಯದ ಕಾರು ಗಿಫ್ಟ್​
  • ಅತ್ಯಾಧುನಿಕ ಅವಕಾಶಗಳಿರುವ ಐಷಾರಾಮಿ ಕಾರು
ಆರ್‌ಜೆ ಬಾಲಾಜಿ ನಿರ್ದೇಶನದ, ನಟ ಸೂರ್ಯ, ತ್ರಿಷಾ ಅಭಿನಯದ ತಮಿಳಿನ ‘ಕರುಪ್ಪು’ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಐಪಿಎಲ್ ಕ್ರೇಜ್ ನಡುವೆಯೂ ಸಿನಿಮಾ ಮೇ 15ರಂದು ತೆರೆಗೆ ಬಂದಿತ್ತು. ರಿಲೀಸ್ ಆದ 15 ದಿನಕ್ಕೆ ‘ಕರುಪ್ಪು’ ಬಾಕ್ಸಾಫೀಸಿನಲ್ಲಿ ಮೇಲುಗೈ ಸಾಧಿಸಿದ್ದು, ಇದುವರೆಗೆ 282 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಮೂರನೇ ವಾರದಂತ್ಯಕ್ಕೆ 300 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ. ಈ ಮೂಲಕ ‘ಕೂಲಿ’ ಚಿತ್ರ ತೆರೆಕಂಡು 9 ತಿಂಗಳ ಬಳಿಕ ತಮಿಳು ಸಿನಿಮಾವೊಂದು 200 ಕೋಟಿ ರೂ. ಕ್ಲಬ್ ಸೇರಿದಂತಾಗಿದೆ. ಹಾಗೇ ಇದು ಸೂರ್ಯ ಸಿನಿಮಾ ಕರಿಯರ್‌ನಲ್ಲೇ ಅತಿಹೆಚ್ಚು ಗಳಿಕೆ ಮಾಡಿಕೊಂಡ ಚಿತ್ರ ಎಂಬ ದಾಖಲೆ ಬರೆದಿದೆ. ಸೂರ್ಯ ನಟನೆ ಜತೆಗೆ ಜತೆಗೆ ಬಾಲಾಜಿ ನಿರ್ದೇಶನ ಮತ್ತು ವಿಷ್ಣು ಛಾಯಾಗ್ರಹಣಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಇದೇ ಖುಷಿಯಲ್ಲಿ ನಾಯಕ ನಟ ಸೂರ್ಯ ಜಿಕೆ ವಿಷ್ಣುಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ. ಹೌದು, ಸಿನಿಮಾ ಗೆದ್ದ ಸಂತಸದಲ್ಲಿ ಸೂರ್ಯ, ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಎಡಿಷನ್ ಕಾರನ್ನು ಗ್‌ಟಿ ಮಾಡಿದ್ದಾರೆ. ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಕಾರು ಸುಮಾರು 28 ರಿಂದ 32 ಲಕ್ಷ ರೂ. ಬೆಲೆ ಹೊಂದಿದೆ. ವೈರ್‌ಲೆಸ್ ಚಾರ್ಜಿಂಗ್, ರೇರ್ ಕ್ಯಾಮರಾ, ಡಿಜಿಟಲ್ ಇನ್‌ಸ್ಟ್ರಕ್ಷನ್ ಕ್ಲಸ್ಟರ್, ವಾಯ್ಸ ಕಮಾಂಡಿಂಗ್, ಸ್ವಯಂಚಾಲಿತ ಹವಾಮಾನ ನಿಯಂತ್ರಣದ ಜತೆಗೆ ಪಾರ್ಕಿಂಗ್ ಸೆನ್ಸಾರ್ ಹಾಗೂ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. ಇದು 59 ಕೆಡಬ್ಲ್ಯೂಎಚ್ ಬ್ಯಾಟರಿಯಿರುವ ಇವಿ ಕಾರಾಗಿದ್ದು, ಪ್ರತಿ ಚಾರ್ಜ್‌ಗೆ 683 ಕಿಮೀ ದೂರ ಸಾಗುವ ಸಾಮರ್ಥ್ಯವಿದೆ. ಸದ್ಯ ಮನೆಗೆ ಕಪ್ಪು ಬಣ್ಣದ ಕಾರನ್ನು ಡೆಲಿವರಿ ಪಡೆದಿರುವ ವಿಷ್ಣು, ‘ಧನ್ಯವಾದಗಳು ಸೂರ್ಯ ಸರ್, ನೀವು ಹೃದಯವಂತರು. ಇದು ದೇವರ ಉಡುಗೊರೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ನಟ ಸೂರ್ಯ ಸಿನಿಮಾ ತಂತ್ರಜ್ಞನನ್ನು ಗುರುತಿಸಿ, ಉಡುಗೊರೆ ನೀಡಿದ್ದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. -ಏಜೆನ್ಸೀಸ್