ಮುಂಬೈ: ಬಾಲಿವುಡ್ ನಟಿ ತಮನ್ನಾ ಭಾಟಿಯಾ ನಟ ವಿಜಯ್ ವರ್ಮಾ ಜತೆಗಿನ ಸಂಬಂಧದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ತಮನ್ನಾ ಮತ್ತು ವಿಜಯ್ ಸಂಬಂಧಗಳ ಕುರಿತು ಸಾಮಾಜಿಕ ಜಾಲತಾಣ ಹಾಗೂ ಬಾಲಿವುಡ್ನಲ್ಲಿ ಸಾಕಷ್ಟು ವದಂತಿಗಳು ಹರಡಿದ್ದವು.
ಮೊದಲ ಬಾರಿಗೆ ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಇಬ್ಬರ ನಡುವಿನ ಚುಂಬನದ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು. ಅಲ್ಲದೇ, ಡಿನ್ನರ್ ಪಾರ್ಟಿ, ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಈ ಜೋಡಿ ಕಾಣಿಸಿಕೊಂಡಿದ್ದರೂ ತಮ್ಮ ವದಂತಿಯ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ.
ಸದ್ಯ, ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಮಾತನಾಡಿರುವ ನಟಿ ತಮನ್ನಾ, ನಾನು ನಿಜವಾಗಿಯೂ ಎದುರು ನೋಡುತ್ತಿರುವ ವ್ಯಕ್ತಿಯಾಗಿದ್ದು, ಆತ ನನಗೆ ತುಂಬಾ ವಿಶೇಷವಾದ ವ್ಯಕ್ತಿ. ಆತನೊಂದಿಗೆ ನನ್ನ ಬಾಂಧವ್ಯ ಉತ್ತಮವಾಗಿದೆ.
ನಾನು ಆತನೊಂದಿಗೆ ಸಂತೋಷವಾಗಿದ್ದು, ಅವನ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಲಸ್ಟ್ ಸ್ಟೊರೀಸ್ 2 ಸಿನಿಮಾದ ಸೆಟ್ನಲ್ಲಿಯೇ ನಮ್ಮ ಪ್ರೀತಿ ಅರಳಿತು ಹಾಗೂ ನಾನು ನನಗಾಗಿ ಒಂದು ಜಗತ್ತನ್ನು ಸೃಷ್ಟಿಸಿಕೊಂಡಿದ್ದೇನೆ. ನಾನು ಏನನ್ನೂ ಮಾಡದೆಯೇ ಆತ ಆ ಜಗತ್ತನ್ನು ಅರ್ಥಮಾಡಿಕೊಂಡಿದ್ದಾನೆ ಎಂದು ನಟಿ ಸ್ಪಷ್ಟನೆ ನೀಡಿದ್ದಾಳೆ.
ಈ ಹಿಂದೆ ತಮನ್ನಾ, ನಾವು ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ಚಿತ್ರರಂಗದಲ್ಲಿ ಸಂಬಂಧಗಳ ಕುರಿತಾದ ವದಂತಿಗಳು ಎಲ್ಲೆಡೆ ಇವೆ. ನನ್ನ ಬಗೆಗಿನ ವದಂತಿ ಬಗ್ಗೆ ಸ್ಪಷ್ಟಪಡಿಸುವುದು ಅನಿವಾರ್ಯವಲ್ಲ. ನಾನು ಇದರ ಬಗ್ಗೆ ಜಾಸ್ತಿ ಹೇಳುವುದಿಲ್ಲ ಎಂದಿದ್ದಳು.(ಏಜೆನ್ಸೀಸ್)