ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ತಾಪಂ ತ್ರೈಮಾಸಿಕ ಸಭೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ತಹಸೀಲ್ದಾರ್ ಡಾ.ಲೋಕೇಶ್, ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತಕುಮಾರ್, ಮಹದೇವು ಇದ್ದರು.
ಮಳವಳ್ಳಿ: ತಾಲೂಕು ಕಚೇರಿಗಳಲ್ಲಿ ಸರಿಯಾಗಿ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಜನರ ಶೋಷಣೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲವೇಕೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಹಸೀಲ್ದಾರ್ ಹಾಗೂ ತಾಪಂ ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಇಲಾಖಾವಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆಯುವ ವೇಳೆ ಆಡಳಿತ ವರ್ಗದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾಲೂಕು ಕಚೇರಿಯಲ್ಲಿ ಎಷ್ಟೇ ಸೂಚನೆ ನೀಡಿದರೂ ಆಡಳಿತ ಸುಧಾರಣೆ ಕಾಣುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ನೇರವಾಗಿ ಜನರ ಬಳಿ ಹೋಗದೆ ಮಧ್ಯವರ್ತಿಗಳ ಮೂಲಕ ಕೆಲಸ ಮಾಡುತ್ತಿದ್ದು, ಇದರಿಂದ ಜನರ ಶೋಷಣೆ ಹೆಚ್ಚಾಗಿದೆ. ಇದೇ ಸ್ಥಿತಿ ತಾಲೂಕು ಪಂಚಾಯಿತಿಯಲ್ಲೂ ಇದ್ದು ಗ್ರಾಪಂ ಕಚೇರಿಗಳಲ್ಲಿ ಸಹ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಪಂ ಸದಸ್ಯರೇ ಮಧ್ಯವರ್ತಿಗಳಾಗಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದರೂ ಆಡಳಿತ ವರ್ಗವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ನೀವುಗಳು ವಿಫಲರಾಗಿದ್ದೀರಿ ಎಂದು ತಹಸೀಲ್ದಾರ್ ಡಾ.ಲೋಕೇಶ್ ಹಾಗೂ ತಾಪಂ ಇಒ ಶ್ರೀನಿವಾಸ್ ವಿರುದ್ಧ ಕಿಡಿಕಾರಿದರು.
ಕೂಡಲೇ ಆಡಳಿತ ಸುಧಾರಣೆಯತ್ತ ಕ್ರಮ ವಹಿಸದಿದ್ದರೆ ನಿಮ್ಮಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿ ಹೋಬಳಿ ಕೇಂದ್ರದಲ್ಲಿ ಆರೋಗ್ಯ ಶಿಬಿರ ನಡೆಸಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸಿ. ಐದು ತಿಂಗಳಾದರೂ ಏಕೆ ನಡೆಸಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಆರೋಗ್ಯ ಶಿಬಿರ ನಡೆಸಲಾಗದೆ ಮೇಲೆ ಜನರಿಗೆ ಹೇಗೆ ಸೇವೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ ಡಿಸೆಂಬರ್ ಒಳಗಾಗಿ ಎರಡು ಶಿಬಿರ ನಡೆಸುವುದಾಗಿ ಒಪ್ಪಿಕೊಂಡರು.
ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದ್ದು, ಮಹಿಳೆಯರು ಶೋಷಣೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಅಧಿಕಾರಿಗಳು ಕಂಪನಿಗಳ ಹಾವಳಿ ತಡೆಗೆ ಮುಂದಾಗಿ ಎಂದು ತಾಕೀತು ಮಾಡಿದರು.
ಪಟ್ಟಣದಲ್ಲಿ ಆರು ದಿನಗಳ ಕಾಲ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ನಡೆಯಲಿದೆ. ಅಂದಿನ ಧಾರ್ಮಿಕ ಸಮಾರಂಭಕ್ಕೆ ರಾಷ್ಟ್ರಪತಿ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ವೇಳೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು. ಪುರಸಭೆ ವತಿಯಿಂದ ರಸ್ತೆ ದೀಪಗಳನ್ನು ಸರಿಪಡಿಸಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ನಾಲೆಗಳ ದುರಸ್ತಿ ಕಾರ್ಯ ನಡೆಯುವುದರಿಂದ ಯಾವ ಭಾಗಕ್ಕೆ ನೀರು ಹರಿಸುವುದಿಲ್ಲ ಎಂಬುದರ ಬಗ್ಗೆ ರೈತರಿಗೆ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಕಟಣೆ ಹೊರಡಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಡಿವೈಎಸ್ಪಿ ಯಶವಂತ್ ಕುಮಾರ್, ತಹಸೀಲ್ದಾರ್ ಡಾ.ಲೋಕೇಶ್, ಇಒ ಶ್ರೀನಿವಾಸ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹದೇವು ಇದ್ದರು.