ಎನ್.ಆರ್.ಪುರ: ಉದ್ಯಮಿಯಾಗಿ ದೇಶ, ವಿದೇಶಗಳನ್ನು ಸುತ್ತಿ ಅಲ್ಲಿನ ಅಭಿವೃದ್ಧಿಯ ಮಾಹಿತಿಯ ಪೂರ್ಣ ಅರಿವಿರುವ ಎಂ.ಶ್ರೀನಿವಾಸ್ ಅವರಿಗೆ ಪ್ರವಾಸೋದ್ಯವ ನಿಗಮದ ಅಧ್ಯಕ್ಷ ಸ್ಥಾನ ದೊರೆತಿರುವುದು ಸೂಕ್ತ ವ್ಯಕ್ತಿಗೆ ಸೂಕ್ತ ಸ್ಥಾನಮಾನ ದೊರೆತಂತಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಹೇಳಿದರು.
ಭಾನುವಾರ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಶ್ರೀನಿವಾಸ್ ಅವರನ್ನು ತಾಲೂಕು ಒಕ್ಕಲಿಗರ ಸಂಘದಿಂದ ಸನ್ಮಾನಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಆಯ್ಕೆ ನಿಜಕ್ಕೂ ಅಭಿನಂದನೀಯ. ತಮ್ಮ ಅಧಿಕಾರಾವಧಿಯಲ್ಲಿ ತಾಲೂಕು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳು ಹೆಚ್ಚೆಚ್ಚು ಅಭಿವೃದ್ಧಿ ಆಗಲಿ ಎಂದು ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಹುಟ್ಟೂರು ಹಾಗೂ ತಾಯಿಯ ಋಣ ಪವಿತ್ರ ಹಾಗೂ ಶ್ರೇಷ್ಠವಾದದು. ಸಿಎಂ ಸಿದ್ದರಾಮಯ್ಯ ಹಾಗೂ ಈ ಊರಿನ ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ಹಾಗೆ ಸೇವೆ ಸಲ್ಲಿಸುತ್ತೇನೆ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಸಿ.ದಿವಾಕರ, ಉಪಾಧ್ಯಕ್ಷ ಎಲ್.ಎಂ.ಸತೀಶ್, ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜ್, ಖಜಾಂಚಿ ಲೋಕೇಶ್, ಭದ್ರಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ, ಉಪಾಧ್ಯಕ್ಷ ಬಿ.ವಿ.ಉಪೇಂದ್ರ ಮತ್ತು ನಿರ್ದೇಶಕರು ಇದ್ದರು.