ನವದೆಹಲಿ: ಕರೊನಾ ವೈರಸ್ ಮಹಾಮಾರಿಯಿಂದ ಆಗುವ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಪ್ರತ್ಯೇಕ ಕೊವಿಡ್-19 ಬಜೆಟ್ ಮಂಡಿಸುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಈ ಕುರಿತು ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಹಲವು ಇಲಾಖೆಗಳು ಕರೊನಾ ನಿಭಾಯಿಸಲು ವ್ಯಯಿಸಲಾದ ಹಣ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಉದ್ಭವಿಸಿದ ವೆಚ್ಚವನ್ನು ಹೊಸದಾದ ಕೊವಿಡ್-19 ಹೆಡ್‌ನಲ್ಲಿ (ಖಾತೆ) ಸೂಚಿಸುತ್ತಿರುವುದರಿಂದ ಈ ಹೊಸ ಚಿಂತನೆ ಹುಟ್ಟಿಕೊಂಡಿದೆ.
ಲಾಕ್‌ಡೌನ್‌ನಿಂದ ವಿಶೇಷವಾಗಿ ದುರ್ಬಲ ವರ್ಗಗಳಿಗೆ ಉಂಟಾಗಿರುವ ಸಂಕಟ ನಿವಾರಣೆಗೆಂದು ಕೇಂದ್ರ ಸರ್ಕಾರ ಇದುವರೆಗೆ 1.76 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.
ಉಚಿತ ರೇಷನ್, ಅಡುಗೆ ಅನಿಲ ಮತ್ತು ನಗದು ನೀಡಿಕೆ ಅದರಲ್ಲಿ ಸೇರಿವೆ. ಈ ಮೊತ್ತ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 0.7ರಷ್ಟಾಗುತ್ತದೆ. ಇತರ ಹಲವು ದೇಶಗಳು ಇನ್ನೂ ಹೆಚ್ಚಿನ ಮಟ್ಟದ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಿವೆ.
ವಿತ್ತ ಸಚಿವಾಲಯ ಎಲ್ಲೆಡೆ ಇತರ ಖರ್ಚಿನ ಮೇಲೆ ನಿರ್ಬಂಧ ವಿಧಿಸಿದ ನಂತರ, ಕೊವಿಡ್ ಮೇಲಿನ ವೆಚ್ಚಕ್ಕೆ ಆದ್ಯತೆ ಸಿಗುತ್ತಿದೆ. ಕರೊನಾ ಹಾವಳಿಯಿಂದ 2021ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ತೀವ್ರ ಏರಿಕೆಯಾಗುವ ಹಿನ್ನೆಲೆಯಲ್ಲಿ ಪ್ರತ್ಯೇಕ ಬಜೆಟ್ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
2021ನೇ ಹಣಕಾಸು ವರ್ಷದಲ್ಲಿ ತೀವ್ರ ಮುಗ್ಗಟ್ಟು ಎದುರಾಗಲಿರುವುದರಿಂದ ಉತ್ತೇಜನ ಕ್ರಮಗಳಿಗೆ ಬಜೆಟ್ ಅಡ್ಡಿಗಳು ತಡೆಯಾಗಬಾರದೆಂಬುದು ಪ್ರತ್ಯೇಕ ಬಜೆಟ್‌ನ ಉದ್ದೇಶವಾಗಿದೆ.