ಕಾಬುಲ್: ತಾಲಿಬಾನ್ನ ಸವೋರ್ಚ್ಚ ನಾಯಕ ಹೈಬತುಲ್ಲಾ ಅಖುಂಡ್ಝದಾ ಇದೇ ಮೊದಲ ಬಾರಿಗೆ ಕಂದಹಾರ್ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಸ್ಲಾಮಿಕ್ ಚಳವಳಿಯ ಧಾರ್ಮಿಕ ಮುಖ್ಯಸ್ಥ ಅಖುಂಡ್ಝದಾ 2016ರಿಂದ ನೇಪಥ್ಯದಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದು, ತಾಲಿಬಾನ್ ಸರ್ಕಾರ ರಚನೆಯಾಗುತ್ತಿರುವಂತೆ ಆಡಳಿತ ಸೂತ್ರ ಕೈಗೆತೆಗೆದುಕೊಳ್ಳುತ್ತಾನೆ ಎಂದು ಸುದ್ದಿಯಾಗಿತ್ತು. ಬಳಿಕ, ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂದೂ ವರದಿಯಾಗಿತ್ತು.
ಅಖುಂಡ್ಝದಾ, ಕಂದಹಾರ್ನ ದಾರುಲ್ ಉಲೂಮ್ ಹಕಿಮಹ್ ಮದ್ರಸ್ಸಾಕ್ಕೆ ಭೇಟಿ ನೀಡಿದ್ದು, ಮೂಲಭೂತವಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದ. ಕಾರ್ಯಕ್ರಮ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಇತ್ತು. ಫೋಟೋ, ವಿಡಿಯೋ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಕೇವಲ 10 ನಿಮಿಷಗಳ ಆಡಿಯೋ ರೆಕಾರ್ಡಿಂಗ್ ಮಾಡಲಾಗಿದ್ದು, ಅದನ್ನು ತಾಲಿಬಾನ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಅಖುಂಡ್ಝದಾನನ್ನು ಅಮಿರುಲ್ ಮೊಮಿನೀನ್ ಎಂದು ಸಂಬೋಧಿಸಲಾಗುತ್ತಿದೆ. ಅವರ ಭಾಷಣದಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ದೇವರ ವಿಚಾರವನ್ನಷ್ಟೇ ಮಾತನಾಡಿದರು ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ಅಮೆರಿಕದ ಸೇನೆ 2016ರಲ್ಲಿ ನಡೆಸಿದ ಡ್ರೋನ್ ದಾಳಿಗೆ ತಾಲಿಬಾನ್ನ ನಾಯಕ ಮುಲ್ಲಾ ಅಖ್ತರ್ ಮನ್ಸೂರ್ ಹತನಾದ ಬಳಿಕ, ಅಖುಂಡ್ಝದಾ ನಾಯಕತ್ವವನ್ನು ವಹಿಸಿದ್ದಾನೆ. ಅಲ್ಲಿಂದೀಚೆಗೆ ಆತ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.
ಸರ್ಕಾರಕ್ಕೆ ಮಾನ್ಯತೆ ಕೊಡದಿದ್ದರೆ ದುಷ್ಪರಿಣಾಮವೆಂದು ಎಚ್ಚರಿಕೆ ಅಫ್ಘಾನಿಸ್ತಾನದ ತನ್ನ ಸರ್ಕಾರಕ್ಕೆ ಮಾನ್ಯತೆ ನೀಡದಿದ್ದರೆ "ಜಾಗತಿಕ ಪರಿಣಾಮ' ಎದುರಿಸಬೇಕಾದೀತೆಂದು ತಾಲಿಬಾನ್ ಎಚ್ಚರಿಸಿದೆ. ಜಗತ್ತಿನ ಯಾವುದೇ ದೇಶ ತಾಲಿಬಾನ್ ಸರ್ಕಾರವನ್ನು ಇದುವರೆಗೆ ಮಾನ್ಯ ಮಾಡಿಲ್ಲ. ಆದರೆ ಅನೇಕ ದೇಶಗಳ ಹಿರಿಯ ಅಧಿಕಾರಿಗಳು ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮಾನ್ಯತೆ ನೀಡದಿದ್ದರೆ ಹಾಗೂ ವಿದೇಶಗಳಲ್ಲಿರುವ ಅ್ಘಾನಿಸ್ತಾನದ ಹಣವನ್ನು ಸ್ಥಗಿತಗೊಳಿಸಿದರೆ ಅಂತಹ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಮಸ್ಯೆಯುಂಟಾಗಬಹುದು ಎಂದು ಅದು ಹೇಳಿದೆ.