ಕಾಬುಲ್: ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿ ಮೂರು ದಿನಗಳಾದರೂ ಗೊಂದಲದ ಸನ್ನಿವೇಶ ಮುಂದುವರಿದಿದೆ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ಗೆ ಉಯ್ಘರ್, ಹಕ್ಕಾನಿ ನಾಯಕರನ್ನು ಸೇರಿಸದಂತೆ ಚೀನಾ ಮತ್ತು ಅಮೆರಿಕದಿಂದ ಒತ್ತಡ ಇದೆ. ಇವೆಲ್ಲದರ ನಡುವೆ ಹೊಸ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದೆ.
ಮಹತ್ವದ ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೆ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಅವರು ತಾಲಿಬಾನ್ ಬಣ ಒಂದರ ಪ್ರಭಾವಿ ನಾಯಕ ಅನಾಸ್ ಹಕ್ಕಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕರ್ಜೆ ಅವರ ವಕ್ತಾರ ನೀಡಿದ ಮಾಹಿತಿ ಪ್ರಕಾರ, ತಾಲಿಬಾನ್ ರಾಜಕೀಯ ನೇತಾರ ಮುಲ್ಲಾ ಅಬ್ದುಲ್ ಘನಿ ಬರದಾರ್ ಜತೆಗೆ ಸರ್ಕಾರ ರಚನೆಯ ಮಾತುಕತೆಗಳು ನಡೆಯುತ್ತಿವೆ.
ಹೊಸ ಸರ್ಕಾರದಲ್ಲಿ ಹಕ್ಕಾನಿ ಪಾಲುದಾರಿಕೆ : ಅಮೆರಿಕ 2012ರಲ್ಲಿ ಹಕ್ಕಾನಿ ನೆಟ್ವರ್ಕ್ನ್ನು ಉಗ್ರ ಗುಂಪು ಎಂದು ಘೋಷಿಸಿತ್ತು. ಅಫ್ಘನ್ನಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಹಕ್ಕಾನಿ ಪಾಲುದಾರಿಕೆ ಇರಲಿದೆ. ತಾಲಿಬಾನ್ ಈಗಾಗಲೇ ಎಲ್ಲರನ್ನೂ ಒಳಗೊಂಡ ಇಸ್ಲಾಮಿಕ್ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದೆ. ಹೀಗಾಗಿ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘನ್ ಸರ್ಕಾರದ ವಿರುದ್ಧ ನಿರ್ಬಂಧಕ್ಕೆ ಕಾರಣವಾದೀತೆಂಬ ವಿಶ್ಲೇಷಣೆ ಕೇಳಿಬಂದಿದೆ.
ಸರ್ಕಾರ ರಚನೆ ಬಳಿಕ ‘ಚೀನಾ’ ಮಾನ್ಯತೆ: ಅಫ್ಘನ್ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರ ರಚನೆ ಆದ ನಂತರವಷ್ಟೆ ಅದಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಬೇಕೋ ಬೇಡವೊ ಎಂಬುದನ್ನು ನಿರ್ಧರಿಸಲಾಗುವುದು ಎಂದು ಚೀನಾ ಬುಧವಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾಹೋ ಲಿಜಿಯಾನ್, ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಬೇಕಾದರೆ, ಅದಕ್ಕೂ ಮೊದಲು ಸರ್ಕಾರ ರಚನೆಯಾಗಬೇಕು. ಸರ್ಕಾರ ರಚನೆಗೆ ಮೊದಲೇ ಮಾನ್ಯತೆ ಪ್ರಶ್ನೆ ಬರುವುದಿಲ್ಲ. ಉಯ್ಗರ್ ಉಗ್ರರು ಸರ್ಕಾರದ ಪಾಲುದಾರರಾಗಬಾರದು ಎಂಬ ಷರತ್ತನ್ನು ತಾಲಿಬಾನ್ಗೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಹಜಾರಾ ನಾಯಕನ ಪ್ರತಿಮೆ ನೆಲಸಮ
ಬಮಿಯಾನ್ನಲ್ಲಿ ಸ್ಥಾಪಿಸಲಾಗಿದ್ದ ಹಜಾರಾ ಸಮುದಾಯದ ನೇತಾರ ಅಬ್ದುಲ್ ಅಲಿ ಮಜಾರಿ ಅವರ ಪ್ರತಿಮೆಯನ್ನು ತಾಲಿಬಾನಿಗಳು ನೆಲಸಮಗೊಳಿಸಿದ್ದಾರೆ. ಅಫ್ಘನ್ನಲ್ಲಿ ಹಿಂದಿನ ತಾಲಿಬಾನ್ ಆಡಳಿತ ಇದ್ದಾಗ 1990ರ ದಶಕದಲ್ಲಿ ನಾಗರಿಕ ಕ್ರಾಂತಿಯ ನೇತೃತ್ವ ವಹಿಸಿದ್ದ ಶಿಟ್ಟೆ ಬಂಡುಕೋರ ನಾಯಕ ಈ ಮಜಾರಿ. 1995ರಲ್ಲಿ ಮಜಾರಿಯನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದರು. ಹಜಾರಾ ಸಮುದಾಯವು ಕೇಂದ್ರೀಯ ಅಫ್ಘನ್ನಲ್ಲಿ ನೆಲೆಸಿದ್ದು, ಹಜರ್ಜಾಟ್ ಎಂದು ಗುರುತಿಸಿಕೊಂಡಿದೆ. ಇವರು ಮಂಗೋಲ್ ಸಾಮ್ರಾಜ್ಯ ಸ್ಥಾಪಕ ಗೆಂಘಿಸ್ ಖಾನ್ನ ಪರಂಪರೆಯವರಾಗಿದ್ದು, 13ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದವರು.
20,000 ಅಫ್ಘನ್ನರಿಗೆ ಬ್ರಿಟನ್ ಆಶ್ರಯ : ಅಫ್ಘನ್ನಲ್ಲಿನ ಪರಿಸ್ಥಿತಿ ಕಾರಣ ಅಲ್ಲಿಂದ ಬರುವ 20,000 ಅಫ್ಘನ್ನರಿಗೆ ‘ನ್ಯೂ ಅಫ್ಘನ್ ಸಿಟಿಝುನ್ ರಿಸೆಟಲ್ಮೆಂಟ್ ಸ್ಕೀಮ್ ಪ್ರಕಾರ ನೆಲೆ ಒದಗಿಸಲಾಗುವುದು ಎಂದು ಬ್ರಿಟನ್ ಹೋಮ್ ಸೆಕ್ರೆಟರಿ ಪ್ರೀತಿ ಪಟೇಲ್ ಘೋಷಿಸಿದ್ದಾರೆ. ಮುಂದಿನ ವರ್ಷ 5,000 ಅಫ್ಘನ್ನರ ಮೊದಲ ತಂಡ ರಾಷ್ಟ್ರಕ್ಕೆ ಆಗಮಿಸಲಿದೆ ಎಂದು ಅವರು ಹೇಳಿದರು.
ಭಾರತೀಯರಿಗೆ ತಾಲಿಬಾನಿಗಳ ಕಾವಲು!
ಕಾಬುಲ್ನಿಂದ ಭಾರತಕ್ಕೆ ಆಗಮಿಸಿದ 150 ಭಾರತೀಯರು ಮಧ್ಯರಾತ್ರಿ ಕಾರ್ಯಾ ಚರಣೆಯ ವಿವರ ಬಹಿರಂಗಪಡಿಸಿದ್ದಾರೆ. ಕಾಬುಲ್ನಲ್ಲಿ ಭಾರತದ ದೂತಾವಾಸದಲ್ಲಿದ್ದ 150ಕ್ಕೂ ಹೆಚ್ಚು ರಾಜತಾಂತ್ರಿಕ ಅಧಿಕಾರಿಗಳು ಮತ್ತು ಪ್ರಜೆಗಳಿಗೆ ಹೊರಗೆ ಸಶಸ್ತ್ರ ತಾಲಿಬಾನ್ ಪಡೆ ಕಾವಲು ನಿಂತಿತ್ತು. ಅವರ ಕೈಗಳಲ್ಲಿ ಮಷಿನ್ ಗನ್ ಮತ್ತು ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ಗಳಿದ್ದವು. ಭಾರತೀಯರನ್ನು ಒಳಗೊಂಡ 12ಕ್ಕೂ ಹೆಚ್ಚು ವಾಹನಗಳು ರಾಯಭಾರ ಕಚೇರಿಯಿಂದ ಹೊರಬಂದಾಗ ಅದಕ್ಕೆ ಬೆಂಗಾವಲು ನಿಂತು ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದ ತಾಲಿಬಾನಿಗಳು, ವಿದಾಯ ಕೋರಿದರು.
ಸೆಂಟ್ರಲ್ ಬ್ಯಾಂಕ್ನಲ್ಲಿ ನಗದು ಇಲ್ಲ
ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ತನ್ನ ಬಳಿ ಹಣ ಇಲ್ಲ ಎಂದು ಬುಧವಾರ ಹೇಳಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬ್ಯಾಂಕ್ ಮುಖ್ಯಸ್ಥ ಅಜ್ಮಲ್ ಅಹ್ಮದಿ, ಬ್ಯಾಂಕ್ ಬಳಿ ಅಂದಾಜು 900 ಕೋಟಿ ಅಮೆರಿಕನ್ ಡಾಲರ್ ಮೀಸಲು ನಿಧಿ ಇದೆ. ಇದರಲ್ಲಿ ಅಂದಾಜು 700 ಕೋಟಿ ಅಮೆರಿಕನ್ ಡಾಲರ್ ಅಮೆರಿಕದ ಫೆಡರಲ್ ರಿಸರ್ವ್ ಬಾಂಡ್ಗಳು, ಅಸೆಟ್ಸ್ ಮತ್ತು ಚಿನ್ನದ ಗಟ್ಟಿ ರೂಪದಲ್ಲಿದೆ. ಡಾಲರ್ ರೂಪದಲ್ಲಿ ಹಣ ಇಲ್ಲ. ತಾಲಿಬಾನ್ ದಿಢೀರ್ ಆಗಿ ದೇಶವನ್ನು ವಶಕ್ಕೆ ತೆಗೆದುಕೊಂಡಿರುವ ಕಾರಣ ಈ ಮೀಸಲನ್ನು ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇಶದಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಬಡತನ ಇನ್ನಷ್ಟು ತಾಂಡವವಾಡಲಿದೆ ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯರಿಗೆ ಹಿಜಬ್, ಪುರುಷರಿಗೆ ಪೈಜಾಮ
ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘನ್ನಲ್ಲಿ ಎಲ್ಲ ಮಹಿಳೆಯರು ಹಿಜಬ್ ಧರಿಸಬೇಕು. ಬುರ್ಖಾ ಅಲ್ಲ. ಅದೇ ರೀತಿ ಪುರುಷರು ಪೈಜಾಮಾ ಧರಿಸುವುದು ಕಡ್ಡಾಯ. ಷರಿಯಾ ಕಾನೂನು ಪ್ರಕಾರವೇ ಆಡಳಿತ ನಡೆಯಲಿದೆ ಎಂದು ತಾಲಿಬಾನ್ ನಾಯಕರು ಮತ್ತೆ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಹಿಜಬ್ ಮತ್ತು ಪೈಜಾಮಾಗಳ ಬೆಲೆ 10 ಪಟ್ಟು ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾರ್ಕ್ಗೆ ಬೆಂಕಿ
ಕಾಬುಲ್ ಪ್ರವೇಶಿಸಿದ ಬಳಿಕ ಅಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ ಗೆ ತೆರಳಿ ಅಲ್ಲಿ ಮಕ್ಕಳ ಜಾರು ಕಾರಿನಲ್ಲಿ ಆಟವಾಡಿದ್ದ ಉಗ್ರರ ವಿಡಿಯೋ ವೈರಲ್ ಆಗಿತ್ತು. ಈ ರೀತಿ ಆಟವಾಡಿದ ಬಳಿಕ ಅವರು ಆ ಪಾರ್ಕ್ಗೆ ಬೆಂಕಿ ಹಚ್ಚಿ ನಾಶಗೊಳಿಸಿರುವ ವಿಡಿಯೋ ಕೂಡ ಈಗ ವೈರಲ್ ಆಗಿದೆ.
ಸಮಾಜವಾದಿ ಸಂಸದ ವಿರುದ್ಧ ರಾಷ್ಟ್ರದ್ರೋಹದ ಕೇಸ್
ತಾಲಿಬಾನಿಗಳನ್ನು ಪ್ರಶಂಸಿಸಿದ್ದ ಸಮಾಜವಾದಿ ಪಾರ್ಟಿ (ಎಸ್ಪಿ)ಯ ಸಂಸದ ಸಂಭಾಲ್ನ ಶಫೀಖುರ್ ರಹ್ಮಾನ್ ವಿರುದ್ಧ ರಾಷ್ಟ್ರದ್ರೋಹದ ಕೇಸ್ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ತಿಳಿಸಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರಾದ ನಾವು ಅವರ ವಿರುದ್ಧ ಹೋರಾಡಿದ್ದೆವು. ಇದೇ ರೀತಿ, ತಾಲಿಬಾನಿಗಳ ಹೋರಾಟ ಸ್ವಾತಂತ್ರ್ಯ ಹೋರಾಟವಾಗಿದ್ದು, ಅವರು ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿದ್ದಾರೆ. ಬಲಿಷ್ಠ ರಾಷ್ಟ್ರಗಳಾದ ರಷ್ಯಾ, ಅಮೆರಿಕದ ಹಸ್ತಕ್ಷೇಪಕ್ಕೆ ಅವರು ಅವಕಾಶ ಮಾಡಿಕೊಡಲಿಲ್ಲ ರಹ್ಮಾನ್ ಮಂಗಳವಾರ ಹೇಳಿದ್ದರು.
ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಭಯಭೀತರಾಗುವುದು ಬೇಡ. ಸರ್ಕಾರ ಮಾನವೀಯ ನೆಲೆಯಲ್ಲಿ ರಕ್ಷಣೆ ನೀಡಲಿದೆ. ರಾಜ್ಯದಲ್ಲಿ 339 ಮಂದಿ ಅಫ್ಘಾನಿಸ್ತಾನದವರಿದ್ದಾರೆ. ಆ ಪೈಕಿ 192 ವಿದ್ಯಾರ್ಥಿಗಳು. | ಆರಗ ಜ್ಞಾನೇಂದ್ರ ಕರ್ನಾಟಕ ಗೃಹ ಸಚಿವ
ವಿದೇಶಿಯರಿಗೆ ಪಾಕ್ ವೀಸಾ
ಕಾಬುಲ್ ಬಿಟ್ಟು ಬರುತ್ತಿರುವ ಎಲ್ಲ ರಾಜತಾಂತ್ರಿಕರು, ವಿದೇಶೀಯರು ಮತ್ತು ಪತ್ರಕರ್ತರಿಗೆ ಪಾಕಿಸ್ತಾನ ಬಂದ ಕೂಡಲೇ ವೀಸಾ ಒದಗಿಸುವ ನಿರ್ಣಯ ತೆಗೆದುಕೊಂಡಿದೆ ಎಂದು ಗೃಹ ಸಚಿವ ಶೇಖ್ ರಷೀದ್ ಅಹ್ಮದ್ ಬುಧವಾರ ತಿಳಿಸಿದ್ದಾರೆ. ಭಾನುವಾರದಿಂದ ಬುಧವಾರದ ತನಕ 900 ವಿದೇಶಿಯರಿಗೆ ವಿಸಾ ಒದಗಿಸಲಾಗಿದೆ.
ಕರ್ನಾಟಕದಲ್ಲಿ ನೋಡಲ್ ಅಧಿಕಾರಿ ನೇಮಕ
ಅಫ್ಘಾನಿಸ್ತಾನದಿಂದ ಕನ್ನಡಿಗರನ್ನು ಕರೆತರಲು ಸಿಐಡಿಯ ಎಡಿಜಿಪಿ ಉಮೇಶ್ಕುಮಾರ್ ಅವರನ್ನು ನೋಡಲ್ ಆಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. ಉಮೇಶ್ಕುಮಾರ್ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರ ಸಂಬಂಧಿಗಳು ದೂರವಾಣಿ 080-22094498 ಅಥವಾ 080-22942628 ಅಥವಾ 0480900187ಗೆ ಸಂರ್ಪಸಬಹುದು. ಇ ಮೇಲ್ ಚ್ಛಜಜಚ್ಞಙkಚ್ಟಃkಠಟ.ಜಟಡ.ಜ್ಞಿರ ಮೂಲಕ ಸಂರ್ಪಸಬಹುದು.
ತಾಲಿಬಾನಿಗಳ ತದ್ವಿರುದ್ಧ ನಡೆ-ನುಡಿ
ಅಫ್ಘನ್ ವಶಪಡಿಸಿಕೊಂಡಿರುವ ತಾಲಿಬಾನಿ ನಾಯಕರು ಶಾಂತಿ, ಸಮಾಧಾನದ ರಾಜತಾಂತ್ರಿಕ ನಡೆ ನುಡಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ, ತಳಮಟ್ಟದಲ್ಲಿ ತಾಲಿಬಾನಿಗಳು ತದ್ವಿರುದ್ಧ ವರ್ತನೆ ತೋರುತ್ತಿದ್ದಾರೆ. 20 ವರ್ಷ ಹಿಂದಿನ ತಾಲಿಬಾನ್ ಆಡಳಿತ ಈ ಬಾರಿ ನಿರೀಕ್ಷಿಸಲಾ ಗದು. ಆದರೆ, ಷರಿಯಾ ಕಾನೂನು ಜಾರಿ ಗೊಳಿಸುವುದಾಗಿ ತಿಳಿಸಿರುವ ತಾಲಿಬಾನ್, ಈಗಾಗಲೇ ಮಹಿಳೆಯರ ಹಕ್ಕು, ಸಾರ್ವಜನಿಕವಾಗಿ ಮರಣದಂಡನೆ, ಟಿವಿ, ಸಂಗೀತ ನಿಷೇಧ ಇತ್ಯಾದಿ ಕ್ರಮಗಳನ್ನು ಜರುಗಿಸತೊಡಗಿದೆ.
ಯುಎಇಗೆ ಘನಿ
ಕಾಬುಲ್ ತಾಲಿಬಾನಿಗಳ ವಶವಾಗುವ ಸುಳಿವು ಸಿಕ್ಕ ಕೂಡಲೇ ನಾಲ್ಕು ಕಾರು, ಒಂದು ಕಾಪ್ಟರ್ನಲ್ಲಿ ಹಣ, ಚಿನ್ನಾಭರಣಗಳೊಂದಿಗೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಗೈದರು ಎಂಬ ವರದಿ ಪ್ರಕಟವಾಗಿತ್ತು. ಆಗಸ್ಟ್ 14ರಿಂದೀಚೆಗೆ ಅವರ ಸುಳಿವು ಇಲ್ಲ. ತಜಕಿಸ್ತಾನದಲ್ಲಿ ಅವರ ಪ್ರವೇಶಕ್ಕೆ ಅನುಮತಿ ಸಿಗದ ಕಾರಣ, ಒಮಾನ್ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಬುಧವಾರದ ಮಾಹಿತಿ ಪ್ರಕಾರ ಘನಿ ಅಬುಧಾಬಿ ತಲುಪಿದ್ದಾರೆ ಎಂದು ಕಾಬುಲ್ ನ್ಯೂಸ್ ವರದಿ ಮಾಡಿದೆ.
ಶಾಂತಿಪಾಲನೆಯ ಹುಸಿ ಭರವಸೆ
ಶಾಂತಿಪಾಲನೆಯ ಭರವಸೆಯ ಹೊರತಾಗಿಯೂ ತಾಲಿಬಾನಿಗಳು ಕಾಬುಲ್ನಲ್ಲಿ ಭಾನುವಾರ ಹಿಂಸಾಚಾರ ನಡೆಸಿದ್ದರು. ಮಕ್ಕಳು, ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅವರನ್ನು ಗುಲಾಮರಂತೆ ನಡೆಸಿಕೊಂಡ ವಿಡಿಯೋಗಳು ವೈರಲ್ ಆಗಿದ್ದವು. ಇದರೊಂದಿಗೆ ಅವರ ಶಾಂತಿಪಾಲನೆಯ ಭರವಸೆ ಹುಸಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಜಲಾಲಾಬಾದ್ನಲ್ಲಿ ಹಿಂಸಾಚಾರ
ಅಫ್ಘನನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅದರ ವಿರುದ್ಧವೇ ಪ್ರತಿಭಟನೆ ನಡೆದಿದೆ. ಜಲಾಲಾಬಾದ್ನಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ ಸಂದರ್ಭದಲ್ಲಿ ಈ ಪ್ರತಿಭಟನೆ ವ್ಯಕ್ತವಾಗಿದೆ. ಇದೇ ವೇಳೆ ತಾಲಿಬಾನ್ ಪಡೆ ಗುಂಡಿನ ದಾಳಿ ನಡೆಸಿದ್ದು, ಮೂವರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.