ಕಾಬುಲ್: ತಾಲಿಬಾನ್ ಆಡಳಿತ ಕ್ರೌರ್ಯದ ಪರಾಕಾಷ್ಠೆ ತಲುಪಿದ್ದು, ವಾಲಿಬಾಲ್ ಆಟಗಾರ್ತಿಯೊಬ್ಬಳ ತಲೆಕತ್ತರಿಸಲಾಗಿದೆ. ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ತಂಡದ ಸದಸ್ಯೆ ಮಹ್ಜಬಿನ್ ಹಕಿಮಿ ಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ರಕ್ತಸಿಕ್ತವಾದ ಆಕೆಯ ರುಂಡ-ಮುಂಡಗಳ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳ ಹತ್ಯೆಯ ಬಗ್ಗೆ ಬಾಯಿಬಿಡದಂತೆ ಆಕೆಯ ಕುಟುಂಬದವರನ್ನು ಬೆದರಿಸಲಾಗಿದೆ. ದೇಶ ತಾಲಿಬಾನ್ ವಶವಾಗುತ್ತಿದ್ದಂತೆ ಉಗ್ರರು
ಮಹಿಳಾ ಕ್ರೀಡಾಪಟುಗಳನ್ನು ಗುರಿಯಾಗಿರಿಸಿ ಕೊಂಡಿದ್ದಾರೆ ಎಂದು ವಾಲಿಬಾಲ್ ತರಬೇತಿ ದಾರೊಬ್ಬರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಫ್ಘನ್ ತಾಲಿಬಾನ್ ವಶವಾಗುವುದಕ್ಕೂ ಮೊದಲು ಮಹ್ಜಬಿನ್ ಕಾಬುಲ್ ಮುನ್ಸಿಪಾಲ್ಟಿ ವಾಲಿಬಾಲ್ ಕ್ಲಬ್ನ ಸ್ಟಾರ್ ಆಟಗಾರ್ತಿಯಾಗಿದ್ದರು. ರಾಷ್ಟ್ರೀಯ ಜೂನಿಯರ್ ಮಹಿಳಾ ತಂಡವು ವಿದೇಶಗಳ ಸ್ಪರ್ಧೆಯಲ್ಲಿ ಭಾಗಿಯಾಗಿತ್ತು. ತಾಲಿಬಾನ್ ಹಿಡಿತ ಹೆಚ್ಚುತ್ತಿದ್ದಂತೆಯೇ ತಂಡದ ಇಬ್ಬರು ಸದಸ್ಯೆಯರು ಬೇರೆ ದೇಶಕ್ಕೆ ಹೋಗಲು ಯಶಸ್ವಿಯಾದರು. ಅನೇಕರು ಇನ್ನೂ ಅಜ್ಞಾತವಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ತರಬೇತುದಾರರ ಹೇಳಿದ್ದಾರೆ.
ಆತ್ಮಾಹುತಿ ದಾಳಿಕೋರರ ಕುಟುಂಬಕ್ಕೆ ನೆರವು
ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸಾತಿಯ ಸಂದರ್ಭದಲ್ಲಿ ನಡೆದ ಘರ್ಷಣೆ ವೇಳೆ ಆತ್ಮಾಹುತಿ ದಾಳಿ ನಡೆಸಿದವರನ್ನು ಕೊಂಡಾಡಿರುವ ತಾಲಿಬಾನ್ ಆಡಳಿತ, ಈ ದಾಳಿಕೋರರ ಕುಟುಂಬಳಿಗೆ 111 ಡಾಲರ್ (8,300 ರೂ.) ಹಣ, ಬಟ್ಟೆ, ಭೂಮಿ ನೀಡುವ ಭರವಸೆ ನೀಡಿದೆ. ಕಾಬುಲ್ನ ಇಂಟರ್ ಕಾಂಟಿನೆಂಟಲ್ ಹೋಟೆಲ್ನಲ್ಲಿ ಆತ್ಮಾಹುತಿ ದಾಳಿಕೋರರ ಕುಟುಂಬದವರನ್ನು ಭೇಟಿಯಾದ ಆಂತರಿಕ ಭದ್ರತಾ ಸಚಿವ ಸಿರಾಜುದ್ದೀನ್ ಹಕ್ಕಾನಿ, ದಾಳಿಕೋರರ ನಡೆಸಿದ ಜಿಹಾದಿಯನ್ನು ಶ್ಲಾಘಿಸಿದ್ದಾನೆ. ಸಿರಾಜುದ್ದೀನ್ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಘೋಷಿಸಿದ್ದು, ಈತನ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ತಾಲಿಬಾನ್ಗಳ ಜತೆ ಅನ್ಯ ದೇಶಗಳ ಚರ್ಚೆ
ಅಫ್ಘನ್ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ತಾಲಿಬಾನ್ ಆಡಳಿತಗಾರರ ಜತೆ ರಷ್ಯಾ ಸರ್ಕಾರ ಮಾಸ್ಕೊದಲ್ಲಿ ಬುಧವಾರ ಸಭೆ ಆಯೋಜಿಸಿತ್ತು. ಅಫ್ಘನ್ನಲ್ಲಿ ಮಾನವೀಯ ಬಿಕ್ಕಟ್ಟು ಕೊನೆಯಾಗಬೇಕು ಎಂಬ ಆಶಯದಿಂದ ಈ ಸಭೆ ಏರ್ಪಡಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಸಭೆಯಲ್ಲಿ ಭಾಗಿಯಾಗಿದ್ದ ಅಫ್ಘನ್ ಹಂಗಾಮಿ ಸರ್ಕಾರದ ಉಪಪ್ರಧಾನಿ ಅಬ್ದುಲ್ಲಾ ಸಲಾಂ ಹನಾಫಿ, ‘ಇಸ್ಲಾಮಿಕ್ ಅನ್ವಯ ಸರ್ಕಾರ ರಚನೆಯಾಗಿದೆ. ದೇಶದ ಭದ್ರತೆ ವಿಶ್ವಾಸಾರ್ಹವಾಗಿದೆ. ನಾವು ಯಾವುದೇ ದೇಶಕ್ಕೆ ಬೆದರಿಕೆ ಒಡ್ಡುವುದಿಲ್ಲ. ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನವನ್ನು ವಿಶ್ವ ಸಮುದಾಯ ಮಾನ್ಯ ಮಾಡಬೇಕು. ವಿಶೇಷವಾಗಿ ನೆರೆಯ ದೇಶಗಳ ಸಹಕಾರ ಮುಖ್ಯ’ ಎಂದು ಮನವಿ ಮಾಡಿದ. ಸಭೆಯಲ್ಲಿ ಭಾರತ, ಚೀನಾ, ಪಾಕ್ ಸೇರಿದಂತೆ ಕೇಂದ್ರ ಏಷ್ಯಾದ 10 ರಾಷ್ಟ್ರಗಳು ಭಾಗಿಯಾಗಿದ್ದವು. ಕತಾರ್ನ ದೋಹಾದ ಸಭೆಯ ನಂತರ ಭಾರತ ತಾಲಿಬಾನ್ ನಾಯಕರ ಜತೆ ಮುಖಾಮುಖಿ ಭೇಟಿಯಾಗುತ್ತಿರುವುದು ಇದೇ ಮೊದಲು. ಆಗಸ್ಟ್ 31ರಂದು ಕತಾರ್ನಲ್ಲಿರುವ ಭಾರತದ ರಾಯಭಾರಿ ತಾಲಿಬಾನ್ ಮುಖಂಡರನ್ನು ಭೇಟಿಯಾಗಿದ್ದರು.