ಬಾಳೆಹೊನ್ನೂರು: ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ಸಚಿವರಾಗಿದ್ದಾಗ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಬೇಕು ಎಂಬ ಆಶಯದಿಂದ ಆರಂಭಿಸಿದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಗೊಳ್ಳುವ ಮೂಲಕ ಅವರ ಶ್ರಮ ಸಾರ್ಥಕಗೊಂಡಿದೆ ಎಂದು ಕಾಫಿ ಬೆಳೆಗಾರ ಬಿ.ಎಂ.ಶಿವಣ್ಣಗೌಡ ಹೇಳಿದರು.
ಬನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕರ್ಕೇಶ್ವರ ಕ್ಲಸ್ಟರ್ ಮಟ್ಟದ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದ್ದು, ಇದರಿಂದ ಉತ್ತಮ ಪ್ರತಿಭೆಗಳು ಮೂಡಿಬರಲು ಸಾಧ್ಯವಿದೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ನಿಂತ ನೀರಲ್ಲ. ಅದು ನಿರಂತರವಾಗಿರುತ್ತದೆ. ಇದನ್ನು ಹೊರ ತರುವ ಕಾರ್ಯವನ್ನು ಶಿಕ್ಷಕರು, ಪಾಲಕರು ಮಾಡಬೇಕಿದೆ ಎಂದರು.
ಸಿಆರ್‌ಪಿ ಸತೀಶ್ ಮಾತನಾಡಿ, ಮಕ್ಕಳಲ್ಲಿ ಇರುವ ಸೃಜನಾತ್ಮಕ, ಕಲಾತ್ಮಕ ಪ್ರತಿಭೆ ಹೊರಹೊಮ್ಮಿಸುವುದೇ ಪ್ರತಿಭಾ ಕಾರಂಜಿ. ಸರ್ಕಾರ ಸರ್ಕಾರಿ ಶಾಲೆ ಮಕ್ಕಳಿಗೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಜಾಗೃತಿ ಮೂಡಿದೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳು ಸೋಲಿಗೆ ಎದೆಗುಂದದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿಯಾಗಿ ಪ್ರತಿಭೆ ಹೊರಹೊಮ್ಮಿಸಬೇಕು ಎಂದರು.
ಮುಖ್ಯಶಿಕ್ಷಕಿ ಮಧುಮಾಲತಿ ಜೋಷಿ, ಗ್ರಾಪಂ ಸದಸ್ಯ ಸುಜಿತ್, ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್ ನಾಯ್ಕ, ಸಿಆರ್‌ಪಿ ಮಾಲತೇಶ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್, ಸದಸ್ಯೆ ಲವೀನಾ, ಎಸ್‌ಡಿಎಂಸಿ ಅಧ್ಯಕ್ಷ ಶೇಷಗಿರಿ, ಉಪಾಧ್ಯಕ್ಷೆ ಸುಪರ್ಣಾ, ಶಿಕ್ಷಕರಾದ ಜಯಣ್ಣ, ಬಾಲಚಂದ್ರ, ಪರ್ವಿನ್ ಮತ್ತಿತರರು ಹಾಜರಿದ್ದರು.