ಶಿವಮೊಗ್ಗ: ನಗರದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸನ್ಮಾನ ಸಮಾರಂಭವನ್ನು ಜು.27ರಂದು ವೀರಶೈವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.
ಈಗಾಗಲೇ ನಗರದಲ್ಲಿ ಸಂಘದಿಂದ ಧಾರ್ಮಿಕ, ಶೈಕ್ಷಣಿಕವಾಗಿ ಅನೇಕ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. 2019-20 ರಿಂದ ನಿರಂತರವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಮಕ್ಕಳು ಜು.20ರೊಳಗೆ ಸಂಘಕ್ಕೆ ಅರ್ಜಿ ಸಲ್ಲಿಸಬೇಕು. ಗಾಡಿಕೊಪ್ಪದಲ್ಲಿ ಸಂಘದಿಂದ ಒಂದು ಎಕರೆ ಜಾಗ ಖರೀದಿ ಮಾಡಿದ್ದು, ಸಮಾಜದಿಂದ ಹೈಟೆಕ್ ಶಾಲೆಯನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು. ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ಅರಿವು ಮೂಡಿಸಲಾಗುವುದು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಪ್ರಮುಖರಾದ ಸಂತೋಷ್ ಬಳ್ಳೆಕೆರೆ, ಮಹಾಲಿಂಗಶಾಸ್ತ್ರಿ, ಪಿ.ರುದ್ರೇಶ್, ರೇಣುಕಾರಾಧ್ಯ, ಟಿ.ಬಿ.ಜಗದೀಶ್, ಶಾಂತಾ ಆನಂದ್, ಮಹೇಶ್‌ಮೂರ್ತಿ, ಬಾಳೆಕಾಯಿ ಮೋಹನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.