ತಮಿಳುನಾಡಿನ ತಾಳವಾಡಿಯಲ್ಲಿರುವ ಕನ್ನಡ ಶಾಲೆ 
ನ್ಯೂಸ್

ಅಲ್ಲೂ ಸಲ್ಲುತ್ತಿಲ್ಲ ಇಲ್ಲೂ ಸಲ್ಲುತ್ತಿಲ್ಲ ತಾಳವಾಡಿ ಕನ್ನಡಿಗರು!; ರಾಜ್ಯ ಸರ್ಕಾರದಿಂದ ಸಿಗದ ಹೊರನಾಡು ಕನ್ನಡಿಗರ ಪಟ್ಟ

Webdesk - Ravikanth

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಮಹಾರಾಷ್ಟ್ರದ ಪುಂಡರಿಂದ ಬೆಳಗಾವಿಯಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾಗಿದ್ದರೆ ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರದಿಂದಲೇ ಅನ್ಯಾಯವಾಗುತ್ತಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭ ತಮಿಳುನಾಡು ಪಾಲಾದ ತಾಳವಾಡಿಯ 52 ಗ್ರಾಮಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಈರೋಡ್ ಜಿಲ್ಲೆಗೆ ಸೇರಿರುವ ಈ ಹಳ್ಳಿಗಳಲ್ಲಿ ಕನ್ನಡ ಶಾಲೆ, ಪಿಯುಸಿ ಕಾಲೇಜು ಸಹ ಇದೆ. ಅಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಕನಸು ಹೊತ್ತು ಕರುನಾಡಿನತ್ತ ಮುಖ ಮಾಡಿ ಚಾಮರಾಜನಗರಕ್ಕೆ ಬಂದರೂ ಶಿಕ್ಷಣ ದೊರೆಯುತ್ತಿಲ್ಲ.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬಿಎಸ್ಸಿ ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್​ನ ಪ್ರವೇಶಾತಿ ಆರಂಭಗೊಂಡಿದ್ದು, ಈ ಕೋರ್ಸ್​ಗೆ ಅರ್ಜಿ ಹಾಕಿದ್ದ ತಾಳವಾಡಿಯ ಇಬ್ಬರು ಕನ್ನಡಿಗ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮದ ಪ್ರಕಾರ ಹೊರನಾಡ ಕನ್ನಡಿಗರು ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕನ್ನಡ, ತುಳು, ಕೊಡವ ಭಾಷೆ ಮಾತೃಭಾಷೆಯಾಗಿರಬೇಕು. ಜತೆಗೆ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಸೊಲ್ಲಾಪುರ, ಅಕ್ಕಲಕೋಟ, ಜಥ್, ಕೇರಳದ ಕಾಸರಗೋಡು, ಮಂಜೇಶ್ವರದವರು ಕನಿಷ್ಠ 7 ವರ್ಷ ವ್ಯಾಸಂಗ ಮಾಡಿರಬೇಕಿದೆ. ಆದರೆ ಕರ್ನಾಟಕ- ತಮಿಳುನಾಡು ಗಡಿಯಲ್ಲಿರುವ ತಾಳವಾಡಿಯನ್ನು ಈ ಪಟ್ಟಿಗೆ ಸೇರಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಕೇವಲ 22 ಕಿಮೀ ಹತ್ತಿರದಲ್ಲಿರುವ ಚಾಮರಾಜನಗರದಲ್ಲಿ ಪದವಿ ವ್ಯಾಸಂಗಕ್ಕೆ ಅವಕಾಶ ಸಿಗುತ್ತಿಲ್ಲ. 120 ಕಿಮೀ ದೂರದ ಈರೋಡ್, 60 ಕಿಮೀ ದೂರ ಇರುವ ಸತ್ಯಮಂಗಲಂಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಬೇಕಾಗಿದೆ.

ಚಾಮರಾಜನಗರಕ್ಕೆ ತಾಳವಾಡಿಯಿಂದ ಓದಲು ಬರುವ ವಿದ್ಯಾರ್ಥಿಗಳ ಸಮಸ್ಯೆಯನ್ನು ನಮಗೆ ಪತ್ರದ ಮೂಲಕ ತಿಳಿಸಿದರೆ ವಿಷಯವನ್ನು ಸರ್ಕಾರಕ್ಕೆ ಮುಟ್ಟಿಸಿ ಬಗೆಹರಿಸುತ್ತೇನೆ. ತಾಳವಾಡಿಗೆ ಮುಂದಿನ ವಾರದಲ್ಲಿ ಭೇಟಿ ನೀಡಿ ಜನರ ಸಮಸ್ಯೆ ಪರಿಹರಿಸಲು ಕ್ರಮವಹಿಸುತ್ತೇನೆ. | ಡಾ.ಸಿ.ಸೋಮಶೇಖರ್ ಅಧ್ಯಕ್ಷ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಮಿಳುನಾಡು- ಚಾಮರಾಜನಗರದ ಗಡಿಯಲ್ಲಿರುವ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕೆಲ ವರ್ಷಗಳ ಹಿಂದೆ ಹನೂರಿನಲ್ಲಿ ಗಡಿಹಬ್ಬ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ನಂತರ ಅದು ಏನಾಯಿತು ಅನ್ನುವುದೇ ಗೊತ್ತಾಗಲಿಲ್ಲ. | ಪ್ರೊ.ಜಯದೇವ್ ದೀನಬಂಧು ಶಿಕ್ಷಣ ಸಂಸ್ಥೆ ಸಂಸ್ಥಾಪಕ, ಚಾಮರಾಜನಗರ

ಎರಡೂ ರಾಜ್ಯದಲ್ಲಿ ಉದ್ಯೋಗವಿಲ್ಲ: ತಾಳವಾಡಿಯ ಐಟಿಐ ಓದಿದ್ದ ವಿದ್ಯಾರ್ಥಿಯೊಬ್ಬನಿಗೆ ಕರ್ನಾಟಕದ ವಿದ್ಯುತ್ ಪ್ರಸರಣ ನಿಗಮದಲ್ಲಿ ಕೆಲಸ ಸಿಗಲಿಲ್ಲ. ತಮಿಳುನಾಡಿಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದವನೆಂದು ಉದ್ಯೋಗ ಕೊಡಲಿಲ್ಲ. ಇದರಿಂದ ಆತ ನಿರುದ್ಯೋಗಿಯಾಗುವಂತಾಯಿತು. ಈ ಸಮಸ್ಯೆ ಎಲ್ಲ ಹುದ್ದೆಗಳಿಗೂ ಅನ್ವಯಿಸುತ್ತದೆ. ಕನ್ನಡ ಮಾಧ್ಯಮ ಶಾಲೆಗಳು ಇಲ್ಲಿ ಇರುವುದರಿಂದ ಶಿಕ್ಷಕರ ಆಯ್ಕೆ ಕಷ್ಟಕರವಲ್ಲ. ಮುಂದಿನ ದಿನಗಳಲ್ಲಿ ಆ ಕೆಲಸ ತೆಗೆದುಕೊಳ್ಳುವುದಕ್ಕೂ ಅಡ್ಡಿಯುಂಟಾ ಗಬಹುದು ಎಂದು ಗುಮಟಾಪುರದ ಕಾಂತಪ್ಪ ವಿಜಯವಾಣಿಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರಕ್ಕೆ ಸದಸ್ಯರ ನೇಮಿಸಿ: ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನು ತಕ್ಷಣ ನೇಮಕ ಮಾಡಬೇಕು. ಈ ಸಂದರ್ಭದಲ್ಲಿ ಗಡಿಯಲ್ಲಿರುವ ಕನ್ನಡ ಪರ ಹೋರಾಟಗಾರರನ್ನೇ ಆಯ್ಕೆ ಮಾಡಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ: ತಾಳವಾಡಿ ಹೋಬಳಿಯ ಎಲ್ಲ ಹಳ್ಳಿಗಳಲ್ಲೂ ಕನ್ನಡಿಗರೇ ಇದ್ದಾರೆ. ಬಿಎಸ್ಸಿ ನರ್ಸಿಂಗ್ ಸೇರಲು ಬಂದಿದ್ದ ತಾಳವಾಡಿ ವಿದ್ಯಾರ್ಥಿಗಳಿಗೆ ಅರ್ಹತೆ ಮಾನದಂಡದಲ್ಲಿ ಸೀಟು ಸಿಗಲಿಲ್ಲ. ಇದರಿಂದ ನಮಗೂ ಬೇಸರವಾಯಿತು. ಈ ಸಮಸ್ಯೆ ಬಗೆಹರಿದು ಕನ್ನಡಿಗರಿಗೆ ಶಿಕ್ಷಣ ಸೌಲಭ್ಯ ಸಿಗುವಂತಾಗಬೇಕೆಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಸಂಜೀವ್​ರೆಡ್ಡಿ ಒತ್ತಾಯಿಸಿದ್ದಾರೆ.