ಹಲಗೂರು: ಮನ್ಮುಲ್ ಹಾಲು ಒಕ್ಕೂಟದಲ್ಲಿ ಸದಸ್ಯರ ಅನುಕೂಲಕ್ಕಾಗಿ ಇರುವ ಕ್ಷೀರ ಸಂಜೀವಿನಿ ಸದ್ಬಳಕೆ ಮಾಡಿಕೊಂಡು ನಿಮ್ಮ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಿ ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೆಗೌಡ ಸಲಹೆ ನೀಡಿದರು.
ಸಮೀಪದ ಬುಯ್ಯನದೊಡ್ಡಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಮಂಗಳವಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕ್ಷೀರ ಸಂಜೀವಿನಿ ಯೋಜನೆಯಲ್ಲಿ ಸದಸ್ಯರಿಗೆ ಬಡ್ಡಿರಹಿತ ಅನುದಾನ ಯೋಜನೆಯು ನಮ್ಮ ಮಳವಳ್ಳಿ ತಾಲೂಕಿಗೆ ಮೂರು ಲಭಿಸಿದ್ದು, ಅದರಲ್ಲಿ ಒಂದನ್ನು ಬುಯ್ಯನದೊಡ್ಡಿ ಗ್ರಾಮದ ಮಹಿಳಾ ಹಾಲು ಒಕ್ಕೂಟಕ್ಕೆ ನೀಡಿದ್ದೇವೆ ಎಂದರು.
ಈ ಸಾಲಿನಲ್ಲಿ ನಿಮ್ಮ ಈ ಸಂಘ 3,41,498 ರೂ. ಲಾಭಾಂಶ ಗಳಿಸಿದೆ. ಗುಣಮಟ್ಟದ ಹಾಲು ನೀಡುವುದರಿಂದ ಉತ್ತಮ ಲಾಭ ಬಂದಿರುತ್ತದೆ. ಇನ್ನೂ ಹೆಚ್ಚಿನ ಗುಣಮಟ್ಟದ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುವುದರಿಂದ ನಿಮಗೆ ಹೆಚ್ಚಿನ ರೀತಿಯಲ್ಲಿ ಬೋನಸ್ ಸಿಗುತ್ತದೆ. ಮುಂದಿನ ದಿನಗಳಲ್ಲಿ ಈಗ ಯಾವ ರೀತಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೀರಿ, ಅದೇ ರೀತಿ ಮುಂದಿನ ದಿನಗಳಲ್ಲೂ ಮುಂದುವರಿಸಿ ಎಂದು ತಿಳಿಸಿದರು.
ಹಾಲು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಹಾಕುತ್ತಿರುವವರನ್ನು ತಾಲೂಕು ಮಟ್ಟದಲ್ಲಿ ಸನ್ಮಾನಿಸಿ ಅಭಿನಂದಿಸಲಾಗುವುದು. ಆದ್ದರಿಂದ ನೀವು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಎಂದರು.
ಗೆಜ್ಜಲಗೆರೆ ಮನ್ಮುಲ್ ತಾಲೂಕು ಮುಖ್ಯಸ್ಥ ಡಾ. ಸದಾಶಿವ ಮಾತನಾಡಿ, ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಗ್ರಾಮದಲ್ಲಿ ಆಸ್ಪತ್ರೆ, ಶಾಲೆ ಎಷ್ಟು ಮುಖ್ಯವೋ ಅದೇ ರೀತಿ ಹಾಲು ಒಕ್ಕೂಟವೂ ಅಷ್ಟೇ ಪ್ರಮುಖವಾಗಿರುತ್ತದೆ. ಆದ್ದರಿಂದ ನೀವು ಗುಣಮಟ್ಟದ ಹಾಲು ಹಾಕುವುದರ ಮೂಲಕ ನಿಮ್ಮ ಗ್ರಾಮದ ಅಭಿವೃದ್ಧಿಗೆ ಹಾಗೂ ಸಂಘಧ ಅಭಿವೃದ್ಧಿಗೆ ಸಹಕಾರಿಯಾಗಿ ಎಂದರು.
ಬುಯ್ಯನದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿ ಹೆಚ್ಚು ಹಣ ಪಡೆದ ಲಕ್ಷ್ಮಮ್ಮ, ಕಲಾವತಿ, ಶಿವಮ್ಮ ಅವರಿಗೆ ಸಂಘದ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮನ್ಮುಲ್ ಗೆಜ್ಜಲಗೆರೆಯ ತಾಲೂಕು ಮುಖ್ಯಸ್ಥ ಡಾ.ಸದಾಶಿವ, ವಿಸ್ತರಣಾಧಿಕಾರಿ ಎಸ್.ಎನ್.ರೇಖಾ, ಇಂದ್ರಜಿತ್, ಸಂಘದ ಉಪಾಧ್ಯಕ್ಷೆ ಚಿಕ್ಕಮುತ್ತಮ್ಮ, ನಿರ್ದೇಶಕರಾದ ಪುಟ್ಟಲಕ್ಷ್ಮಮ್ಮ, ಪುಷ್ಪಲತಾ, ರುಕ್ಮಿಣಿ, ಲಕ್ಷ್ಮಮ್ಮ, ಅರಸಮ್ಮ, ಶಿವಮ್ಮ, ವೆಂಕಟಲಕ್ಷ್ಮೀ, ಲಕ್ಷ್ಮಮ್ಮ, ಕಾರ್ಯದರ್ಶಿ ಪುಷ್ಪ ಪುಟ್ಟರಾಜು, ಹಾಲು ಪರೀಕ್ಷಕಿ ನಾಗರತ್ನ ಮತ್ತಿತರರಿದ್ದರು.