ಶಿವಮೊಗ್ಗದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಜಿ.ಕೆ.ಮಿಥುನ್‌ಕುಮಾರ್, ವಿ.ಎನ್.ಪುಟ್ಟು ಸಿಂಗ್, ಅನಿಲ್‌ಕುಮಾರ್ ಭೂಮರಡ್ಡಿ ಹಾಗೂ ಕಾರಿಯಪ್ಪ ಪೊಲೀಸ್ ಧ್ವಜ ಬಿಡುಗಡೆಗೊಳಿಸಿದರು 
ನ್ಯೂಸ್

ಸರ್ಕಾರ ನೀಡಿರುವ ಆರೋಗ್ಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ಶಿವಮೊಗ್ಗ: ಪೊಲೀಸರು ಇಲಾಖೆಯ ದೈನಂದಿನ ಕರ್ತವ್ಯದ ಜತೆಗೆ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಬೇಕು. ಪೊಲೀಸ್ ಸಿಬ್ಬಂದಿಗೆ ಸರ್ಕಾರ ನೀಡಿರುವ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಂಡು ದೈಹಿಕ ಕ್ಷಮತೆ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಸಹಾಯಕ ಉಪನಿರೀಕ್ಷಕ ವಿ.ಎನ್.ಪುಟ್ಟು ಸಿಂಗ್ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿ, ಇಲಾಖೆಯ ಎಲ್ಲ ಸಿಬ್ಬಂದಿ ಭಯ ಮತ್ತು ಒತ್ತಡಮುಕ್ತವಾಗಿ ಕಾರ್ಯ ನಿರ್ವಹಿಸಬೇಕು. ಜತೆಗೆ ಆರೋಗ್ಯ ಕಾಪಾಡಿಕೊಂಡು ಲವಲವಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ನಾಲ್ಕು ದಶಕಗಳ ಕಾಲ ಹಿರಿಯ ಅಧಿಕಾರಿಗಳ ಸಕಾಲಿಕ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ನೀಡಿದೆ. ಸೇವಾ ಅವಧಿಯಲ್ಲಿ ಕಾರ್ಯಕ್ಷೇತ್ರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ನನಗಿದೆ ಎಂದರು.

ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹವಾಗುವ ಹಣದಲ್ಲಿ ಶೇ.50ರಷ್ಟನ್ನು ಪೊಲೀಸರ ಕ್ಷೇಮನಿಧಿಗೆ ನೀಡಲಾಗುವುದು. ಕಾಯಿಲೆಯಿಂದ ಬಳಲುತ್ತಿರುವ ಪೊಲೀಸ್ ಸಿಬ್ಬಂದಿಗೆ, ನಿವೃತ್ತರಿಗೆ ಹಾಗೂ ಮೃತ ವ್ಯಕ್ತಿ ಕುಟುಂಬದವರ ಕಲ್ಯಾಣಕ್ಕೆ ನಿಧಿ ಬಳಸಲಾಗುತ್ತದೆ ಎಂದರು.

ಪೊಲೀಸ್ ಧ್ವಜವನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಹಾಗೂ ಕಾರಿಯಪ್ಪ ಬಿಡುಗಡೆಗೊಳಿಸಿದರು. ಧ್ವಜ ದಿನಾಚರಣೆ ಅಂಗವಾಗಿ 6 ಪೊಲೀಸ್ ತುಕಡಿಗಳು ನಿಧಾನ ಹಾಗೂ ತೀವ್ರಗತಿ ಪಥಸಂಚಲನ ನಡೆಸಿದವು. ಆರ್‌ಪಿಐ ಪ್ರಶಾಂತ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಸಶಸ್ತ್ರ ಮೀಸಲು ಪಡೆ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಣ್ ನೇತೃತ್ವದ ತಂಡ ಆಕರ್ಷಕ ಪೊಲೀಸ್ ಬ್ಯಾಂಡ್ ಪ್ರದರ್ಶಿಸಿತು.