ಕೋಲಾರ ಎಸ್ಪಿ ಕಚೇರಿಯಲ್ಲಿ ಕೋಲಾರ ಕೆಜಿಎಫ್ ಜಿಲ್ಲಾ ಪೋಲಿಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಗೃಹಸಚಿವ ಜಿ.ಪರಮೇಶ್ವರ, ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಇದ್ದರು.  
ನ್ಯೂಸ್

ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮ ವಹಿಸಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಯಾವುದೇ ರೀತಿಯ ಅಪರಾಧ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ತನಿಖೆಯಿಂದ ಕೈತೊಳೆದುಕೊಳ್ಳಬೇಡಿ. ಆರೋಪಿತರಿಗೆ ನ್ಯಾಯಲಯದಿಂದ ಶಿಕ್ಷೆ ಆಗುವಂತೆ ಕ್ರಮ ವಹಿಸುವುದು ಪೊಲೀಸರ ಜವಾಬ್ದಾರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಿರ್ದೇಶನ ನೀಡಿದರು.

ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬುಧವಾರ ಎಸ್ಪಿ ಕಚೇರಿಯಲ್ಲಿ ನಡೆದ ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
ಪ್ರತಿ ತಿಂಗಳು ಎಸ್ಸಿ, ಎಸ್ಟಿ ಸಮುದಾಯಗಳ ಜತೆ ಸಭೆ ನಡೆಸಿ, ಕುಂದು ಕೊರತೆ ಆಲಿಸಬೇಕು. ಕಾಟಾಚಾರಕ್ಕೆ ಸಭೆ ನಡೆಸಿ ಕಳುಹಿಸುವುದನ್ನು ಸಹಿಸುವುದಿಲ್ಲ. ಸೂಕ್ತ ಪರಿಹಾರ ಕಲ್ಪಿಸುವ ಕೆಲಸವಾಗಬೇಕು. ಶೋಷಿತ ಸಮುದಾಯಗಳಿಗೆ ನ್ಯಾಯ, ರಕ್ಷಣೆ ಒದಗಿಸುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ರ್ನಿಲಕ್ಷ್ಯ ತೋರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳಾಗುತ್ತಿವೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಹೆದ್ದಾರಿಗಳಲ್ಲಿನ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ, ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಿರುವ ಅಗತ್ಯ ಕ್ರಮದ ಕುರಿತು ಹೆದ್ದಾರಿ ಪ್ರಾಧಿಕಾರದವರಿಗೆ ವರದಿ ನೀಡಬೇಕು. ಈ ಬಗ್ಗೆ ರ್ನಿಲಕ್ಷ್ಯವಹಿಸುವುದು ಬೇಡ ಎಂದರು.
ಮಕ್ಕಳಿಗೆ ಆಮಿಷವೊಡ್ಡಿ ದೌರ್ಜನ್ಯ ಎಸಗುವುದು, ದುಶ್ಚಟಗಳಿಗೆ ದೂಡುತ್ತಿರುವ ಬಗ್ಗೆ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ದೂರುಗಳು ಕೇಳಿಬಂದರೆ, ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು. ಸಂತ್ರಸ್ತರಿಗೆ ನೆರವು ನೀಡಿ, ಸರ್ಕಾರದಿಂದ ಅಗತ್ಯ ಪರಿಹಾರ ಕಲ್ಪಿಸಬೇಕು. ಅಲ್ಲದೇ, ತಪ್ಪಿತಸ್ಥರು ಕಾನೂನು ಪರಿಧಿಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ನಿಗಾವಹಿಸಬೇಕು ಎಂದು ಸೂಚಿಸಿದರು.
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಪೋಕ್ಸೋ ಕೇಸ್ ಸೇರಿ ಇನ್ನಿತರ ಪ್ರಕರಣಗಳು ಎಷ್ಟೇ ಹಳೆಯದಾಗಿದ್ದರೂ ನಿರಂತರವಾಗಿ ನಿಗಾವಹಿಸಬೇಕು. ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ಸಿಗದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ತನಿಖೆ ಸಂದರ್ಭದಲ್ಲಿ ಡಿಜಿಟಲ್ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಬೇಕು. ಇವು ನ್ಯಾಯಾಲಯದಲ್ಲಿ ಮಹತ್ವ ಪಡೆದುಕೊಂಡು, ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಸೈಬರ್ ವಂಚಕರು ಇತ್ತೀಚೆಗೆ ಹಳ್ಳಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜನರಿಗೆ ತಿಳಿವಳಿಕೆ ಇಲ್ಲದಿರುವುದನ್ನೇ ಗುರಿಯಾಗಿಸಿಕೊಂಡು ಆಮಿಷಗಳನ್ನು ಒಡ್ಡಿ, ನಾನಾ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಡೇಟಾ ಸಂಗ್ರಹಿಸಿ ಬ್ಲ್ಯಾಕ್ಮೇಲ್ ಮಾಡಿ ಹಣ ಕೀಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ದೆಹಲಿ, ಬೆಂಗಳೂರು ನಗರ ಪೊಲೀಸರನ್ನು ಅನುಸರಿಸಿ ಜನರಿಗೆ ಮುಂಜಾಗ್ರತೆ ಮೂಡಿಸುವ ಕೆಲಸ ಮಾಡಬೇಕು. ಜಿಲ್ಲಾ ಪೊಲೀಸರು ಅಧಿಕೃತ ಸಾಮಾಜಿಕ ಜಾಲತಾಣ ಬಳಸಬೇಕು. ಜಾಲತಾಣಗಳ ಮೂಲಕ ಜನರು ದೂರು ನೀಡಿದರೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಕೇಂದ್ರ ವಲಯ ಐ.ಜಿ.ಪಿ. ಡಾ.ಬಿ.ಆರ್.ರವಿಕಾಂತೇಗೌಡ, ಕೋಲಾರ ಎಸ್ಪಿ ನಾರಾಯಣ್, ಕೆ.ಜಿ.ಎಫ್. ಎಸ್ಪಿ ಶಾಂತರಾಜು ಸೇರಿದಂತೆ ಕೋಲಾರ ಕೆ.ಜಿ.ಎಫ್.ನ ಎಸ್ಪಿ ಕಛೇರಿಯ ಡಿ.ವೈ.ಎಸ್.ಪಿಗಳು ಇದ್ದರು.