ಗ್ರಾಪಂಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೆಆರ್‌ಎಸ್ ಪ್ರಮುಖರು ಜಿಪಂ ಕಚೇರಿ ಎದುರು ಪ್ರತಿಭಟಿಸಿದರು. ಎಸ್.ಕೆ.ಪ್ರಭು, ಶರತ್‌ಕುಮಾರ್, ರಾಮಪ್ಪ, ಪ್ರವೀಣ್ ಇತರರಿದ್ದರು. 
ನ್ಯೂಸ್

ಗ್ರಾಪಂಗಳಲ್ಲಿ ದುರ್ವರ್ತನೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಿ

ಶಿವಮೊಗ್ಗ: ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಕೆಳಹಂತದ ಸಿಬ್ಬಂದಿ ಮೇಲೆ ದೌರ್ಜನ್ಯ ತೋರುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪ್ರಮುಖರು ಬುಧವಾರ ಜಿಪಂ ಎದುರು ಪ್ರತಿಭಟನೆ ನಡೆಸಿದರು.

ಕೆಲ ಗ್ರಾಪಂಗಳಲ್ಲಿ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನವಾಗಿಲ್ಲ. ಸರ್ಕಾರದ ಯೋಜನೆಗಳಲ್ಲೂ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ. ಜನರಿಗೆ ಸ್ಥಳೀಯವಾಗಿ ಉತ್ತಮ ಸೇವೆಗಳು ದೊರೆಯುತ್ತಿಲ್ಲ. ಅಧಿಕಾರಿಗಳು ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಗುತ್ತಿಗೆ ನೌಕರರಿಗೆ ಸರಿಯಾದ ಸೌಲಭ್ಯ ನೀಡದೆ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಗ್ರಂಥಾಲಯ ಮೇಲ್ವಿಚಾರಕರಾಗಿ 32 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಾಸೂರು ಗ್ರಂಥಾಲಯದ ಮಂಜುನಾಥ್ ಅವರನ್ನು ಕೆಲಸದಿಂದ ವಜಾ ಮಾಡಿದ್ದು, ಅವರಿಗೆ 8 ತಿಂಗಳ ಸಂಬಳ ಸಿಗದಂತೆ ನೋಡಿಕೊಳ್ಳಲಾಗಿದೆ. ಸಾಗರ ತಾಲೂಕು ಆವಿನಹಳ್ಳಿ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಕೆಆರ್‌ಎಸ್ ಕಾರ್ಯಕರ್ತರೊಂದಿಗೆ ದುರ್ವರ್ತನೆ ತೋರಿದ್ದಾರೆ. ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಪ್ರಭು, ಪ್ರಮುಖರಾದ ಶರತ್‌ಕುಮಾರ್, ಮಂಜುನಾಥ್, ಮಲ್ಲಿಗೆ, ಕಾಶಿನಾಥ್, ರಾಮಪ್ಪ, ರಾಘವೇಂದ್ರ, ಷಡಾಕ್ಷರಪ್ಪ, ಪ್ರವೀಣ್ ಮತ್ತಿತರರು ಇದ್ದರು.