ಹಿಂದುಗಳ ಮೇಲೆ ದಾಳಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಿಂದು ಹಿತರಕ್ಷಣಾ ಸಮಿತಿ, ಬಿಜೆಪಿ ಮುಖಂಡರಿಂದ ತಹಸೀಲ್ದಾರ್ ಮಂಜುಳಾ ಹೆಗಡಾಳ್‌ಗೆ ಮನವಿ ಸಲ್ಲಿಸಿದರು.ಸುಧಾಕರ ಬಾವೆ, ಪ್ರಕಾಶ್, ರಂಗನಾಥ ಮೊಗೇರ್, ಮಹೇಶ್ ಖಾರ್ವಿ ಇತರರಿದ್ದರು. 
ನ್ಯೂಸ್

ಪೈಶಾಚಿಕ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಿ

ಶಿವಕುಮಾರ ಎಸ್.ಪಿ.

ಸೊರಬ: ಜಮ್ಮು-ಕಾಶ್ಮೀರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹಿಂದುಗಳ ಮೇಲೆ ಪೈಶಾಚಿಕ ದಾಳಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿ ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ತಹಸೀಲ್ದಾರ್ ಮಂಜುಳಾ ಹೆಗಡಾಳ್‌ಗೆ ಮನವಿ ಸಲ್ಲಿಸಿದರು.

ಗಡಿಯಾಚೆಯಿಂದ ಬಂದ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ದುಷ್ಕೃತ್ಯ ಎಸಗಿದ್ದಾರೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಕೊನೆಗೊಳಿಸುವ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ನಮ್ಮ ದೇಶದ ಆಡಳಿತವನ್ನು ದಿಕ್ಕುತಪ್ಪಿಸುವ ಉದ್ದೇಶದಿಂದ ದುರುಳ ಮತಾಂಧರು ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಮುರ್ಶಿದಾಬಾದ್, ಮಾಲ್ಡಾ ಹಾಗೂ 24 ಪರಗಣ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ತ್ವರಿತಗತಿಯಲ್ಲಿ ಏರುತ್ತಿದೆ. ಚಿಕ್ಕಂದಿನಿಂದಲೇ ಹಿಂದುಗಳ ಬಗ್ಗೆ ಅವರಲ್ಲಿ ಅಸಹಿಷ್ಣುತೆ ಬೆಳಸಲಾಗಿದೆ. ಕೇಂದ್ರ ಸರ್ಕಾರ ದೇಶದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ನೆಪದಲ್ಲಿ ಹಿಂದುಗಳು, ದೇವಸ್ಥಾನಗಳ ದಾಳಿ ಮಾಡುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಭಯೋತ್ಪಾದನೆ ಮೂಲಕ ಹಿಂದುಗಳನ್ನು ವಾಸಸ್ಥಾನದಿಂದ ಹೊರಹಾಕಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕದಲ್ಲೂ ಇದೇ ರೀತಿಯ ಪ್ರತ್ಯೇಕತಾವಾದವನ್ನು ಪೋಷಿಸುವಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಮುಸ್ಲಿಂ ಮೀಸಲಾತಿ, ಗಲಭೆಗಳಲ್ಲಿ ಆರೋಪಿಗಳ ಮೇಲೆ ಇರುವ ಗುರುತರ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತದೆ. ಗೋಹತ್ಯೆ, ಲವ್ ಜಿಹಾದ್ ಮತ್ತಿತರ ಕೃತ್ಯಗಳು ನಡೆಯುತ್ತಿವೆ. ಈ ಪ್ರತ್ಯೇಕತಾವಾದ, ಮೂಲಭೂತವಾದ, ಅಸಹಿಷ್ಣುತೆಗೆ ಪ್ರೇರಕವಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಹಿಂದು ಹಿತರಕ್ಷಣಾ ಸಮಿತಿಯ ಸುಧಾಕರ ಬಾವೆ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮುಖಂಡ ಡಾ. ಇ.ಎಚ್.ಜ್ಞಾನೇಶ್, ನಾಗರಾಜ್ ಗುತ್ತಿ, ಡಿ.ಶಿವಯೋಗಿ, ರವಿ ಗಡಿಗಾರ್, ಮಹೇಶ್ ಖಾರ್ವಿ, ರಂಗನಾಥ ಮೊಗೇರ್, ಕಾಳಿಂಗರಾಜ್, ಯೋಗೇಶ್, ಜಾನಕಪ್ಪ, ವೈ.ಜಿ.ಗುರುಮೂರ್ತಿ, ಸಂಜೀವ ಆಚಾರ್, ಮೋಹನ್ ಇತರರಿದ್ದರು.