ಚಕ್ರಾ, ಸಾವೆಹಕ್ಲು ಸಂತ್ರಸ್ತರಿಗೆ ಅಗಸವಳ್ಳಿಯಲ್ಲಿ ಮೀಸಲಿರಿಸಿರುವ ಜಾಗವನ್ನು ಅಕ್ರಮವಾಗಿ ಬಡಾವಣೆಯಾಗಿ ಪರಿವರ್ತಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಬ್ರಹ್ಮಣ್ಯ, ಶ್ರೀಕರ, ತಿಮ್ಮಪ್ಪ, ವೆಂಕಟೇಶ್, ಉಮೇಶ್ ಮತ್ತಿತರರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಜಮೀನು ಕಬಳಿಸುವವರ ವಿರುದ್ಧ ಕ್ರಮ ಕೈಗೊಳ್ಳಿ:ಸಂತ್ರಸ್ತರ ಆಗ್ರಹ

ಶಿವಮೊಗ್ಗ: ಚಕ್ರಾ, ಸಾವೆಹಕ್ಲು ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿದ್ದ ಜಮೀನಿಗೆ ಅಕ್ರಮವಾಗಿ ಬೇಲಿ ಹಾಕಿದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಚಕ್ರಾ, ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಪುನರ್ವವಸತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗ ತಾಲೂಕು ಕಸಬಾ-1 ಹೋಬಳಿ ಅಗಸವಳ್ಳಿ ಗ್ರಾಮದ ಸರ್ವೆ ನಂ.147ರಲ್ಲಿ ಮುಳುಗಡೆ ಸಂತ್ರಸ್ತರಿಗೆ 1,148.30 ಎಕರೆ ಮೀಸಲಿರಿಸಲಾಗಿದೆ. ಇದರಲ್ಲಿ 470 ಎಕರೆ ಭೂಮಿ ಸಮತಟ್ಟು ಮಾಡಿ, ಗಡಿ ಗುರುತಿಸಿ ಬ್ಲಾಕ್ ನಂ.1ರಿಂದ 187ರವರಗೆ ತಲಾ 2ರಿಂದ 3 ಎಕರೆಯಂತೆ ಮುಳುಗಡೆ ಸಂತ್ರಸ್ತರಿಗೆ ಖಾತೆ ಮಾಡಿ ಹಂಚಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮುಳುಗಡೆ ಸಂತ್ರಸ್ತರಿಗೆಂದು ಮೀಸಲಿರಿಸಿದ್ದ ಜಮೀನಿಗೆ ಶಿವಮೊಗ್ಗದ ಕೆಲ ಮಂದಿ ಅಕ್ರಮ ಪ್ರವೇಶ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ರಾಗಿಗುಡ್ಡದ ಕೆಲವರು ಗುಂಪು ಕಟ್ಟಿಕೊಂಡು ಜಾಗವನ್ನು ಅಕ್ರಮವಾಗಿ ಮಾರುತ್ತಿದ್ದಾರೆ. ಕೆಲವರು ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸುವ ಸಂತ್ರಸ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ತುಂಗಾ ನಗರ ಠಾಣೆಯಲ್ಲಿ 30ಕ್ಕೂ ಹೆಚ್ಚು ದೂರುಗಳು ಈಗಾಗಲೇ ದಾಖಲಾಗಿವೆ ಎಂದರು.
ಅಕ್ರಮವಾಗಿ ಅಳವಡಿಸಿದ ತಂತಿಬೇಲಿ ತೆರವುಗೊಳಿಸಿ, ಅಕ್ರಮ ಎಸಗುವವರನ್ನು ಬಂಧಿಸಬೇಕು. ಸಂತ್ರಸ್ತರಿಗೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು. ಹಲವು ಸಂತ್ರಸ್ತರಿಗೆ ಜಮೀನು ಹಂಚಿಕೆ ಮಾಡಬೇಕಿದ್ದು. ಕಾಲಮಿತಿಯಲ್ಲಿ ಹಂಚಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚಕ್ರಾ, ಸಾವೆಹಕ್ಲು ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಉಮೇಶ್, ಶ್ರೀಕರ, ರಿಪ್ಪನ್‌ಪೇಟೆ ತಿಮ್ಮಪ್ಪ, ವೆಂಕಟೇಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.