ನ್ಯೂಸ್

ದೆಹಲಿಗೆ ಬಂದಿಳಿದ ಸಂಚುಕೋರ ತಹವ್ವೂರ್ ರಾಣಾ; ನ್ಯಾಯಾಲಯದ ಹೊರಗೆ ಹೆಚ್ಚಿದ ಭದ್ರತೆ| tahawwur Rana

ಇಂದು (10) ಮಧ್ಯಾಹ್ನ 2:50 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ರಾಣಾ ಪ್ರಾಯಾಣ ಆರಂಭಿಸಿದ ವಿಮಾನ ಲ್ಯಾಂಡ್ ಆಗಿದೆ. ರಾಣಾನನ್ನು ಈಗ NIA ಅಧಿಕಾರಿಗಳು ಬಂಧಿಸಿದ್ದು, ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಇಂದೇ ರಾಣಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎನ್ನಲಾಗ್ತಾ ಇದೆ.

Tahawwur Rana : ವಾಣಿಜ್ಯ ನಗರಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಅಮೆರಿಕ ಗಡಿಪಾರು ಮಾಡಿದೆ. ಇನ್ನೂ ವಿಚಾರಣೆಗಾಗಿ ಈಗಾಗಲೇ ರಾಣಾನನ್ನು ಸೂಕ್ತ ಬಿಗಿ ಭದ್ರತೆಯೊಂದಿಗೆ ದೆಹಲಿಗೆ ಕರೆತರಲಾಗಿದೆ.

ಇನ್ನೂ ನ್ಯಾಯಾಲಯದ ಸುತ್ತ ಹೆಚ್ಚಿನ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದ ಹೊರಗೆ ಅರೆಸೈನಾ ಪಡೆಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ. ಈ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳು ಮಾತನಾಡಿದ್ದು, ರಾಣಾನನ್ನು ಹೆಚ್ಚಿನ ಭದ್ರತೆಯ ಜೈಲು ವಾರ್ಡ್‌ನಲ್ಲಿ ಇರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ನ್ಯಾಯಾಲಯದ ಆದೇಶಗಳಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ತಹವೂ‌ರ್ ರಾಣಾ?

ರಾಣಾ, 2008, ನವೆಂಬರ್ 11 ಮತ್ತು 21ರ ನಡುವೆ ದುಬೈ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದ. ಪೊವೈನಲ್ಲಿರುವ ಹೋಟೆಲ್ ರೆನೈಸಾನ್ಸ್‌ನಲ್ಲಿ ತಂಗಿದ್ದಾಗ, ದಾಳಿಯ ಲಾಜಿಸ್ಟಿಕ್ಸ್ ಸಿದ್ಧತೆಗಳನ್ನು ಆತ ಪರಿಶೀಲಿಸಿದ್ದಾನೆಂದು ನಂಬಲಾಗಿದೆ. ಇದಾದ ಕೇವಲ ಐದು ದಿನಗಳ ನಂತರ, ನವೆಂಬರ್ 26 ರಂದು ಸಂಘಟಿತ ದಾಳಿಗಳು ನಡೆದವು. ಇದರ ಪರಿಣಾಮವಾಗಿ 170ಕ್ಕೂ ಹೆಚ್ಚು ಜನರು ಮೃತಪಟ್ಟರು. ಇಲ್ಲಿಯವರೆಗೆ, ಈ ಮಾರಕ ದಾಳಿಗೆ ಶಿಕ್ಷೆಗೊಳಗಾದ ಏಕೈಕ ಎಲ್‌ ಇಟಿ ಭಯೋತ್ಪಾದಕನೆಂದರೆ ಅದು ಅಲ್ಮಲ್ ಕಸಬ್.. ದಾಳಿಯ ಸಮಯದಲ್ಲಿ ಅಧಿಕಾರಿಗಳು ಆತನನ್ನು ಜೀವಂತವಾಗಿ ಸೆರೆಹಿಡಿದರು.

ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾಗಿರುವ ರಾಣಾ, ಮುಂಬೈ ದಾಳಿಯ ಪ್ರಮುಖ ಸಂಚುಕೋರ "ದೌದ್ ಗಿಲಾನಿ" ಎಂದೂ ಕರೆಯಲ್ಪಡುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ದಾಳಿಯನ್ನು ನಡೆಸುವಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಇ-ತೈಬಾ (LeT) ಗೆ ಬೆಂಬಲ ನೀಡುವಲ್ಲಿ ಹೆಡ್ಲಿ ಮತ್ತು ಪಾಕಿಸ್ತಾನದಲ್ಲಿರುವ ಇತರರಿಗೆ ಸಹಾಯ ಮಾಡಿದ ಆರೋಪ ರಾಣಾ ಮೇಲಿದೆ.

64 ವರ್ಷದ ರಾಣಾ, ಈವರೆಗೆ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದ. ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡುವುದನ್ನು ತಡೆಯಬೇಕೆಂದು ಕೋರಿ ಕಳೆದ ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್‌ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ರಾಣಾ ತುರ್ತು ಅರ್ಜಿಯನ್ನ ಸಲ್ಲಿಸಿದ್ದ. ಆದರೆ, ಕಳೆದ ತಿಂಗಳು ಅದನ್ನು ನಿರಾಕರಿಸಲಾಯಿತು. ಇದಾದ ನಂತರ, ರಾಣಾ ತನ್ನ ತುರ್ತು ಅರ್ಜಿಯನ್ನು ಅಪ್‌ಡೇಟ್ ಮಾಡಿ, ಅದನ್ನು ಅಮೆರಿಕ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದ. ಆ ಅರ್ಜಿಯ ವಿಚಾರಣೆ ಏಪ್ರಿಲ್ 4ರಂದು ನಡೆಯಿತು. ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು. ಇದೀಗ ಅಮೆರಿಕ ಆತನನ್ನು ಗಡಿಪಾರು ಮಾಡಿದ್ದು, ಭಾರತಕ್ಕೆ ಕರೆತರಲಾಗಿದೆ.

ಭಾರತವು 2020ರ ಜೂನ್ ತಿಂಗಳಲ್ಲಿ ರಾಣಾ ಅವರ ತಾತ್ಕಾಲಿಕ ಬಂಧನಕ್ಕೆ ಔಪಚಾರಿಕವಾಗಿ ವಿನಂತಿಸಿತು. ಅಲ್ಲದೆ, ಹಸ್ತಾಂತರಕ್ಕಾಗಿ ಕಾನೂನು ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ, ರಾಣಾ ಹಸ್ತಾಂತರವನ್ನು ದೃಢಪಡಿಸಿದರು ಮತ್ತು ರಾಣಾ ಭಾರತಕ್ಕೆ ಹೋಗಿ ನ್ಯಾಯವನ್ನು ಎದುರಿಸಲಿದ್ದಾನೆ ಎಂದು ಹೇಳಿದರು.

(ಏಜೆನ್ಸಿಸ್)