ನ್ಯೂಸ್

ತಗೋಳೇ ತಗೋಳೇ... ನನ್ನೇ ತಗೋಳೇ!

ಬಾಬುಪ್ರಸಾದ್​ ಮೋಡಿಸ್​

ನಾಗಮಂಗಲ: ನಟ ಉಪೇಂದ್ರ ಅಭಿನಯದ ಸೂಪರ್​ಸ್ಟಾರ್ ಚಿತ್ರದಲ್ಲಿ ಪ್ರೀತಿ ಸಿಗದ ಕಾರಣ ನಾಯಕ ‘ತಗೋಳೇ... ತಗೋಳೇ ನನ್ನೇ ತಗೋಳೇ ಎಂದು ಹಾಡುತ್ತಾ ತನ್ನ ದೇಹದ ಅಂಗಾಂಗಗಳನ್ನು ಕತ್ತರಿಸಿ ಎಸೆಯುತ್ತಾನೆ. ಅದೇ ರೀತಿ ನಾಗಮಂಗಲ ತಾಲೂಕಿನ ಕಾಳೇನಹಳ್ಳಿಯಲ್ಲಿ ಯುವಕನೊಬ್ಬ ಪ್ರೀತಿ ಸಿಗದೆ ಮನನೊಂದು ತನ್ನನ್ನೇ ಸ್ಪೋಟಿಸಿಕೊಂಡಿದ್ದಾನೆ! ಪ್ರೀತಿ ಸಿಗದೆ ಪ್ರೇಮಿಗಳು ವಿವಿಧ ಬಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ, ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕ ಪ್ರೇಮ ವೈಫಲ್ಯದಿಂದ ಮನನೊಂದು ಬಾಲಕಿ ಮನೆ ಮುಂದೆಯೇ ಜಿಲೆಟಿನ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ತಾಲೂಕಿನ ಬಸವೇಶ್ವರನಗರ ನಿವಾಸಿ ರಾಮಚಂದ್ರು (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಭಾನುವಾರ ಬೆಳಗ್ಗೆ ಘಟನೆ ನಡೆದಿದೆ. ರಾಮಚಂದ್ರು ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದು, ಈ ಸಂಬಂಧ ಪೋಕ್ಸೋ ಕಾಯ್ದೆಯಡಿ 6 ತಿಂಗಳು ಜೈಲುಶಿಕ್ಷೆ ಕೂಡ ಅನುಭವಿಸಿದ್ದ. ನಂತರ ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ರಾಜಿ-ಸಂಧಾನ ನಡೆದು, ಪೋಕ್ಸೋ ಪ್ರಕರಣ ಅಂತ್ಯಗೊಂಡಿತ್ತು. ಆದರೆ, ಕಳೆದೊಂದು ವಾರದಿಂದ ಖಿನ್ನತೆಗೆ ಒಳಗಾಗಿದ್ದ ರಾಮಚಂದ್ರು, ಹುಡುಗಿ ಬಗ್ಗೆ ಸಂಬಂಧಿಕರ ಜತೆ ಅಳಲು ತೋಡಿಕೊಂಡಿದ್ದ. ಭಾನುವಾರ ಮುಂಜಾನೆ 3.30ರಲ್ಲಿ ಬಾಲಕಿಯ ಮನೆ ಬಳಿ ತೆರಳಿ ಮನೆಯ ಬಾಗಿಲ ಮುಂದೆ ಜಿಲೆಟಿನ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮೊದಲು ಬಾಲಕಿಯ ಮನೆ ಗೋಡೆ ಮೇಲೆ ‘ನನ್ನ ಹುಚ್ಚು ಪ್ರೇಮ’ ಎಂದು ಬರೆದಿದ್ದಾನೆ. ಸ್ಪೋಟಕ ಸಿಡಿಸಿಕೊಂಡಿರುವ ತೀವ್ರತೆಗೆ ರಾಮಚಂದ್ರುವಿನ ಹೊಟ್ಟೆ ಹಾಗೂ ತೊಡೆಯ ಭಾಗ ಸಂಪೂರ್ಣ ಛಿದ್ರವಾಗಿ ಗೋಡೆಗಳಿಗೆ ದೇಹದ ಭಾಗಗಳು ಅಂಟಿಕೊಂಡಿದ್ದವು.

ಬಾಲಕಿ, ಆಕೆಯ ತಾಯಿ ಮತ್ತು ಸಹೋದರ ಮನೆಯೊಳಗಿದ್ದು ಸ್ಪೋಟದ ಶಬ್ಧ ಕೇಳಿ ಭಯಭೀತರಾಗಿ ದ್ದಾರೆ. ನಂತರ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಪೋಟದ ಶಬ್ಧಕ್ಕೆ ಪಕ್ಕದ ಮನೆಯ ನಿವಾಸಿಗಳು ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಸ್ಪೋಟಕ ಶೇಖರಣೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.