ನ್ಯೂಸ್

taekwondo girl movie review: ಸಾಹಸಿ ‘ಟೇಕ್ವಾಂಡೋ ಗರ್ಲ್’

ಎಲ್ಲ ಮಕ್ಕಳು ಓದಿನಲ್ಲಿ ಮುಂದೇ ಇರುವುದಿಲ್ಲ. ಅವರಿಗೆ ಅವರದೇ ಆದ ಕೌಶಲ ಇದ್ದೇ ಇರುತ್ತದೆ. ಕೆಲವರು ಪಾಠದಲ್ಲಿ ಮುಂದೇ ಇರದಿದ್ದರೂ ಆಟದಲ್ಲಿ ಮುಂದಿರುತ್ತಾರೆ. ಆದರೆ, ಅವರ ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ನಿರ್ದೇಶಕ ರವೀಂದ್ರ ವೆಂಶಿ ‘ಟೇಕ್ವಾಂಡೋ ಗರ್ಲ್’ ಮೂಲಕ ಹೇಳಲು ಹೊರಟಿದ್ದಾರೆ.

ಋತು (ಸ್ಪರ್ಶ) ಓದಿನಲ್ಲಿ ಹಿಂದೆ. ಮನೆಯ ಪಕ್ಕದಲ್ಲಿ ಯಾವ ಸರ್ಕಾರಿ ಶಾಲೆ ಇಲ್ಲ ಎಂದ ಅರಿತ ಪಾಲಕರು ಆರ್‌ಟಿಇ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಪ್ರತಿಷ್ಠಿತ ಶಾಲೆಗೆ ಸೇರಿಸುತ್ತಾರೆ. ಋತು ಉತ್ತಮ ಮಾರ್ಕ್ಸ್ ಪಡೆದಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಕರ ದೂರಿಗೆ ಕಾರಣವಾಗುತ್ತಾಳೆ. ಆದರೆ, ಆಕೆಯ ಆಸಕ್ತಿ ಮಾತ್ರ ಟೇಕ್ವಾಂಡೋದಲ್ಲಿ. ಈ ಸಮರ ಕಲೆಯ ತರಬೇತಿ ಪಡೆಯಲು ಖರ್ಚು ಮಾಡಲು ಕುಟುಂಬದಿಂದ ಅಸಾಧ್ಯ ಎಂಬುದನ್ನು ಅರಿತ ಅವಳು ಪಾರ್ಕ್‌ನೊಂದರಲ್ಲಿ ತರಬೇತಿ ನೀಡುವುದನ್ನು ದೂರದಿಂದಲೇ ನೋಡಿ ಟೇಕ್ವಾಂಡೋ ಕಲಿಯುತ್ತಾಳೆ. ಅದೇ ಅವಳಿಗೆ ಒಂದು ರೀತಿಯಲ್ಲಿ ಮುಳುವಾಗುತ್ತದೆ. ಇದರಿಂದ ಶಾಲೆಯಿಂದ ಹೊರಗುಳಿಯುವಂತಾಗುತ್ತದೆ. ಅಷ್ಟಕ್ಕೂ ಶಾಲೆಯಿಂದ ದೂರ ಉಳಿಯಲು ಋತು ಮಾಡಿದ್ದಾದರೂ ಏನು? ಕೊನೆಗೆ ಋತುವಿನ ಟೇಕ್ವಾಂಡೋ ಕಲಿಯುವ ಆಸಕ್ತಿ ಏನಾಯಿತು? ಈ ಮಧ್ಯೆ, ಯಾವೆಲ್ಲ ಸವಾಲು ಆ ಬಾಲಕಿ ಎದುರಿಸುತ್ತಾಳೆ ಎಂಬುದು ಸಿನಿಮಾದ ಮುಂದಿನ ಕಥೆ.

ನಿರ್ದೇಶಕ ರವೀಂದ್ರ ವೆಂಶಿ ಕಥೆಯನ್ನು ಸರಳವಾಗಿ ಒಂದೇ ಲೈನ್‌ನಲ್ಲಿ ಹೇಳುತ್ತಾ ಸಾಗಿದ್ದಾರೆ. ಕೆಲವೊಂದಿಷ್ಟು ಟ್ವಿಸ್ಟ್, ದೃಶ್ಯಗಳನ್ನು ಸೇರಿಸುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಮಕ್ಕಳ ಸ್ಫೂರ್ತಿಗಾಥೆ ಸಿನಿಮಾದಲ್ಲಿ ಕೆಲವೆಡೆ ಸಾಹಸ ದೃಶ್ಯಗಳ ಮೂಲಕ ಋತುವನ್ನು ಹೀರೋ ಮಾಡಲು ಹೋಗಿರುವುದು ಅಭಾಸ ಎನಿಸುತ್ತದೆ. ಇನ್ನಷ್ಟು ಸ್ಫೂರ್ತಿಯಾಗಿ ಭಾವನಾತ್ಮಕ ದೃಶ್ಯಗಳನ್ನು ಕಥೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶ ಇತ್ತು. ಟೇಕ್ವಾಂಡೋ ಗರ್ಲ್ ಆಗಿ ಋತು ಸ್ಪರ್ಶ ಮಿಂಚಿದ್ದು, ನಟನೆ ತರಬೇತಿ ಇನ್ನಷ್ಟು ಅಗತ್ಯ ಇತ್ತು ಎನಿಸುತ್ತದೆ. ತಾಯಿ ಲಿಂಗವ್ವ ಪಾತ್ರದಲ್ಲಿ ಪಲ್ಲವಿ ರಾವ್ ಪಾತ್ರ ನಿಭಾಯಿಸಿದ್ದಾರೆ. ಶಮಿತಾ, ರೇಖಾ ಕೂಡ್ಲಿಗಿ, ವೆಂಶಿ ರವೀಂದ್ರ ಪಾತ್ರಗಳು ಗಮನಸೆಳೆಯುತ್ತವೆ.