ಲಖನೌ: ಕರೊನಾ ವೈರಸ್ನ ಹಾಟ್ಸ್ಫಾಟ್ ಆದ ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ದೇಶದಲ್ಲಿ ಎಲ್ಲ ರಾಜ್ಯದಿಂದಲೂ ಮುಸ್ಲಿಮರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಆಯಾ ರಾಜ್ಯ ಸರ್ಕಾರಗಳು ಅಂತಹವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ಗೆ ಒಳಪಡಿಸುತ್ತಿದ್ದಾರೆ.
ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಬ್ಲಿಘಿ ಜಮಾತ್ ಸಮಾವೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾಗವಹಿಸಿದ್ದವರನ್ನೆಲ್ಲ ಪತ್ತೆ ಹಚ್ಚಿ ಅವರ ಮೊಬೈಲ್ ವಶಪಡಿಸಿಕೊಳ್ಳಬೇಕು. ಅದರಲ್ಲಿ ಕಾಲ್ ಡಿಟೇಲ್ಸ್ ಚೆಕ್ ಮಾಡಬೇಕು ಎಂದಿದ್ದಾರೆ.
ಕರೊನಾ ವೈರಸ್ ತೀವ್ರವಾಗುತ್ತಿದ್ದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ನಿರ್ಬಂಧ ವಹಿಸಿದ್ದರೂ ಅದನ್ನು ಪಾಲಿಸದ ತಬ್ಲಿಘಿ ಜಮಾತ್ ನಿಜಾಮುದ್ದೀನ್ ಮಸೀದಿಯಲ್ಲಿ ಮಾ.13ರಿಂದ 15ರವರೆಗೆ ಧಾರ್ಮಿಕ ಸಮಾವೇಶ ನಡೆಸಿತ್ತು. ದೇಶ ಹಾಗೂ ವಿದೇಶಗಳಿಂದ ಸುಮಾರು 3000 ಜನ ಪಾಲ್ಗೊಂಡಿದ್ದರು. ಅದೀಗ ದೊಡ್ಡ ಕರೊನಾ ವೈರಸ್ ಕೇಂದ್ರವಾಗಿ ಮಾರ್ಪಟ್ಟಿದೆ.
ಈಗ ಉತ್ತರಪ್ರದೇಶ ಸಿಎಂ ಆದಿತ್ಯನಾಥ್, ನಿರ್ಬಂಧ ವಿಧಿಸಿದ್ದರೂ ಸಭೆ ನಡೆಸಿದ್ದಾರೆ. ಲಾಕ್ಡೌನ್ ಇದ್ದರೂ ಅದನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘನೆ ಮಾಡುತ್ತಿದ್ದಾರೆ. ಇದೆಲ್ಲ ವ್ಯವಸ್ಥಿತ ಪಿತೂರಿಯಾಗಿದೆ. ಆ ಜನರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರನ್ನು ಹಿಡಿಯಬೇಕು. ಅವರ ಮೊಬೈಲ್ಗಳನ್ನು ವಶಪಡಿಸಿಕೊಂಡು, ಯಾರಿಗೆಲ್ಲ ಕರೆ ಮಾಡಿದ್ದಾರೆ, ಇವರ ಮೊಬೈಲ್ಗೆ ಯಾರೆಲ್ಲ ಕರೆ ಮಾಡಿದ್ದಾರೆ. ಸಂದೇಶಗಳು ಏನಿವೆ ಎಲ್ಲದನ್ನೂ ಚೆಕ್ ಮಾಡಬೇಕು. ಹಾಗೇ ಅವರ ಬಳಿ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅದನ್ನೂ ವಶಪಡಿಸಿಕೊಳ್ಳಿ. ಆದರೆ ಸ್ವಚ್ಛತೆಯ ಕಡೆ ವಿಶೇಷ ಗಮನಕೊಡಿ. ಅವರು ವಾಸಿಸಿದ್ದ ಸ್ಥಳವನ್ನು ಶುದ್ಧಗೊಳಿಸಿ ಎಂದು ಕರೊನಾ ನಿಯಂತ್ರಣ, ಲಾಕ್ಡೌನ್ ನಿರ್ವಹಣೆಗಾಗಿ ರಚಿತವಾದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡಕ್ಕೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್)