ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಶಬ್ದ ಎಂದರೆ ತಬ್ಲಿಘಿ. ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದ ತಬ್ಲಿಘಿಗಳ ಬಗ್ಗೆ ವಾದ- ಪ್ರತಿವಾದಗಳ ಮಹಾಪೂರವೇ ಹರಿದಿತ್ತು.
ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಹಿನ್ನೆಲೆಯಲ್ಲಿ ಇಡೀ ದೇಶದ ತುಂಬ ಈ ಘಟನೆ ಆತಂಕ ಸೃಷ್ಟಿ ಮಾಡಿತ್ತು. ಈಗಲೂ ಈ ಘಟನೆ ಸದ್ದು ಮಾಡುತ್ತಲೇ ಇದೆ. ದೇಶದಲ್ಲಿ ಕರೊನಾ ಸೋಂಕು ಹರಡಲು ಕೆಲವು ತಬ್ಲಿಘಿಗಳೇ ಕಾರಣ ಎಂಬ ಗಂಭೀರ ಆರೋಪವೂ ಎಲ್ಲೆಡೆ ಕೇಳಿ ಬಂದಿವೆ.
ಅದೇ ಇನ್ನೊಂದೆಡೆ, ನಿಜಾಮುದ್ದೀನ್ ಘಟನೆಯ ನಂತರ ತಲೆಮರೆಸಿಕೊಮಡಿದ್ದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಹುಡುಕಾಟವೂ ಬಲು ಜೋರಾಗಿಯೇ ನಡೆದಿತ್ತು. ಅನೇಕ ತಬ್ಲಿಘಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೌಲಾನಾ ಸಾದ್ಗೂ ಸೋಂಕು ಇರಬಹುದೆ ಎಂಬ ಸಂದೇಹ ಬಲವಾಗಿತ್ತು.
ಆದರೆ ಇದೀಗ ಬಂದಿರುವ ವರದಿಯ ಪ್ರಕಾರ, ಮೌಲಾನಾ ಸಾದ್‌ಗೆ ಸೋಂಕು ದೃಢಪಟ್ಟಿಲ್ಲ. ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಸೂಚನೆಯ ಮೇರೆಗೆ ಪರೀಕ್ಷೆಗೆ ಒಳಪಟ್ಟ ಸಾದ್ ಕುರಿತಂತೆ ವರದಿ ಬಂದಿದ್ದು, ಸೋಂಕು ನೆಗೆಟಿವ್ ಬಂದಿದೆ ಎಂದಿದ್ದಾರೆ ಅವರ ಪರ ವಕೀಲರು. ಪರೀಕ್ಷಾ ವರದಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಬಳಿಕ ಸೋಮವಾರ ಮೌಲಾನಾ ಕ್ರೈಂ ಬ್ರಾಂಚ್ ಮುಂದೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಪೊಲೀಸರ ನಿರ್ದೇಶನದ ಮೇರೆ ಕ್ವಾರಂಟೈನ್ನಲ್ಲಿ ಇದ್ದ ಸಾದ್, ಸರ್ಕಾರದ ಆದೇಶದಂತೆ ನಾನೂ ಕ್ವಾರಂಟೈನ್ ನಲ್ಲಿದ್ದು, ನೀವೂ ಕೂಡ ಸರ್ಕಾರದ ಆದೇಶ ಪಾಲಿಸಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು. (ಏಜೆನ್ಸೀಸ್)