ನ್ಯೂಸ್

ಸೂಪರ್​ ಮಾರ್ಕೆಟ್​ನಿಂದ ತಂದಿದ್ದ ಚೀಲದಿಂದ 2 ಆಲೂಗಡ್ಡೆ ತೆಗೆದ ಮಹಿಳೆ, ಮತ್ತೆ ಕೈ ಹಾಕಿದಾಗ ಅದೆಷ್ಟು ಶಾಕ್​ ಆದರೆಂದರೆ...! ಈಗಲೂ ನಿದ್ರಿಸಲಾಗುತ್ತಿಲ್ಲ ಎನ್ನುತ್ತಿದ್ದಾರೆ..

ಸೌತ್​ವೇಲ್​: ಮಹಿಳೆಯೋರ್ವರು ಸೂಪರ್ ​ಮಾರ್ಕೆಟ್​ನಿಂದ 4 ಕೆಜಿಯ ಆಲೂಗಡ್ಡೆ ಬ್ಯಾಗ್​ನ್ನು ತಂದರು. ಚೀಲವನ್ನು ಮನೆಗೆ ತಂದು, ಬಿಚ್ಚಿ ಎರಡು ಆಲೂಗಡ್ಡೆಯನ್ನು ತೆಗೆದಿದ್ದಷ್ಟೇ, ಒಮ್ಮೆಲೇ ಕೂಗಿಕೊಂಡು ಹಿಂದೆ ಸರಿದರು. ಆ ಕ್ಷಣದಲ್ಲಿ ಅವರು ಸಿಕ್ಕಾಪಟೆ ಶಾಕ್​ಗೆ ಒಳಗಾಗಿದ್ದರು.

ವಿಚಿತ್ರ ಘಟನೆ ನಡೆದಿದ್ದು ಆಸ್ಟ್ರೇಲಿಯಾದ ಸೌತ್​ವೇಲ್​ನಲ್ಲಿ. ಮರಿಸ್ಸಾ ಡೆವಿಡ್​ಸನ್​ ಎಂಬ ಮಹಿಳೆಗೆ ಭಯ ಹುಟ್ಟಿಸುವ ಸನ್ನಿವೇಶವೊಂದು ಎದುರಾಯ್ತು. ಇವರು ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆಂದು ಸೂಪರ್​ಮಾರ್ಕೆಟ್​ಗೆ ತೆರಳಿದ್ದರು. ಮಹಿಳೆ ತಂದ ವಸ್ತುಗಳಲ್ಲಿ ನಾಲ್ಕು ಕೆಜಿ ತೂಕದ ಆಲೂಗಡ್ಡೆ ಚೀಲವೂ ಒಂದು. ಮುಂದೇನಾಯ್ತು ಎಂಬ ಬಗ್ಗೆ ಅವರೇ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾನು ಚೀಲವನ್ನು ಮನೆಗೆ ತಂದು ಬಿಚ್ಚಿ, ಎರಡು ಆಲೂಗಡ್ಡೆಯನ್ನು ಹೊರಗೆ ತೆಗೆದಿದ್ದೆ. ಮತ್ತಷ್ಟು ಹೊರಗೆ ತೆಗೆಯಲೆಂದು ಕೈ ಹಾಕುತ್ತಿದ್ದಂತೆ ಒಂದು ಹಾವು ಹೊರಗೆಬಂತು. ಜೀವಂತ ಹಾವು ನೆಗೆದು ನೆಲಕ್ಕೆ ಬಿದ್ದಿದ್ದನ್ನು ನೋಡಿ ಸಿಕ್ಕಾಪಟೆ ಹೆದರಿಬಿಟ್ಟೆ ಎಂದು ಹೇಳಿದ್ದಾರೆ.

ಹಾವು ನೆಲಕ್ಕೆ ಬಿದ್ದು ಸರಸರನೇ ನನ್ನ ಐದು ವರ್ಷದ ಮಗ ಇದ್ದ ಕಡೆಗೆ ಹೋಗುತ್ತಿತ್ತು. ಏನು ಮಾಡಬೇಕು ಎಂದೇ ಗೊತ್ತಾಗುತ್ತಿರಲಿಲ್ಲ. ಆತನಿಗೆ ಹೃದಯ ಸಮಸ್ಯೆ ಇದೆ. ಹಾವನ್ನು ನೋಡಿ ಹೆದರುತ್ತಿದ್ದ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಅವನು ಭಯದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಕೂಡಲೇ ಹೋಗಿ ಮಗುವನ್ನು ಎತ್ತುಕೊಂಡೆ. ನಂತರ ಅಲ್ಲಿಯೇ ಇದ್ದ ವಾಕ್ಯೂಮ್​ ಕ್ಲೀನರ್​ ತೆಗೆದುಕೊಂಡು ಹಾವಿನ ತಲೆಯ ಮೇಲೆ ಹೊಡೆದು, ಜಜ್ಜಿಹಾಕಿದೆ ಎಂದು ಮರಿಸ್ಸಾ ಘಟನೆಯನ್ನು ವಿವರಿಸಿದರು.

ನೆನಪಿಸಿಕೊಂಡರೇ ತುಂಬ ಭಯವಾಗುತ್ತದೆ ಎಂದು ಹೇಳಿರುವ ಮರಿಸ್ಸಾ, ಹೀಗೆ ತರುವ ಚೀಲಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. ಹಾಗೇ ಹಾವಿನ ಫೋಟೋವನ್ನೂ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)