ನ್ಯೂಸ್

ಟಿ.ನರಸೀಪುರ ತಾಲೂಕಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನನ್ನು ಎಳೆದೊಯ್ದ ಚಿರತೆ, ಶವ ಪತ್ತೆ, ಗ್ರಾಮಸ್ಥರ ಆಕ್ರೋಶ

ಮೈಸೂರು: ಟಿ.ನರಸೀಪುರ (T. Narasipura) ತಾಲ್ಲೂಕಿನಲ್ಲಿ ಚಿರತೆ (Leopard) ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಮನೆಯ ಮುಂದೆ ಕುಳಿತ್ತಿದ್ದ ಯುವತಿಯ ಮೇಲೆ ಚಿರತೆ ದಾಳಿ ಮಾಡಿ ಕೊಂದ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ದುರ್ಘಟನೆ ಸಂಭವಿಸಿದ್ದು, 11 ವರ್ಷದ ಬಾಲಕ ಚಿರತೆ ದಾಳಿ (Leopard attack)ಗೆ ಬಲಿಯಾಗಿದ್ದಾನೆ.

ಹೊರಳಹಳ್ಳಿ ಗ್ರಾಮದ ಜಯಂತ್ (11) ಮೃತ ಬಾಲಕ. ಈ ಘಟನೆ ನಿನ್ನೆ (ಜ.21) ತಡರಾತ್ರಿ ನಡೆದಿದೆ. ಬಾಲಕನ ಮೇಲೆ ದಾಳಿ ಮಾಡಿದ ಚಿರತೆ ಆತನನ್ನು ಕೊಂದು, ದೇಹವನ್ನು ಹೊತ್ತೊಯ್ದಿದೆ. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯೆಲ್ಲ ಹುಡುಕಾಟ ನಡೆಸಿದ್ದು, ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಲಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಮೃತ ಬಾಲಕನ ಶವ ಪತ್ತೆ ಹಚ್ಚುವ ಭರವಸೆ ನೀಡಿದರು.

ಶವ ಪತ್ತೆ

ಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಮೃತ ಬಾಲಕನ ದೇಹ ಪತ್ತೆಯಾಗಿದೆ. ಬಾಲಕನ ಸ್ವಲ್ಪ ದೇಹವನ್ನು ಚಿರತೆ ತಿಂದು ಹಾಕಿದ್ದು, ಅದನ್ನು ನೋಡಿದ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಶವ ಸಿಕ್ಕ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಿರುಗಿ ಬಿದ್ದ ಜನತೆ

ಟಿ. ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಗುಡುಗಿದ್ದಾರೆ. ನರಸೀಪುರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳು ಮನುಷ್ಯರು, ಸಾಕು ಪ್ರಾಣಿಗಳನ್ನ ಬಲಿ ಪಡೆಯುತ್ತಲೇ ಇದೆ. ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ? ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ತಪ್ಪಿಸಲು ಯಾವ ಕ್ರಮ ಕೈಗೊಂಡಿದ್ದೀರಾ? ನಿಮ್ಮ ಸುಳ್ಳು ಭರವಸೆಗಳು, ಪರಿಹಾರಗಳು ನಮಗೆ ಬೇಡ. ಚಿರತೆಗಳನ್ನು ಕೊಂದಾದರೂ ತಾಲ್ಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಿ. ಇಲ್ಲ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳ್ತಾರೆ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಎಚ್ಚರಿಕೆ ನೀಡಿದರು.

ಮೇಘನಾ ಸಾವು

ಕಳೆದ ಡಿಸೆಂಬರ್​ 1ರಂದು ಟಿ.ನರಸೀಪುರ ತಾಲೂಕಿನ ಎಸ್​. ಕಬ್ಬೆಹುಂಡಿಯಲ್ಲಿ ಮನೆಯ ಮುಂದೆ ಕುಳಿತಿದ್ದ ಯುವತಿ ಮೇಘನಾ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮೇಘನಾಳನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೇಘನಾ ಅಸುನೀಗಿದಳು. (ದಿಗ್ವಿಜಯ ನ್ಯೂಸ್​)