ನ್ಯೂಸ್

ಶ್ಯಾನುಭೋಗರಿಂದಲೇ ತುಂಬಿದ್ದ ಶ್ಯಾನುಭೋಗನಹಳ್ಳಿ

  • ಪ್ರಕೃತಿ ಮಡಿಲಲ್ಲಿದೆ ಸುಂದರ ಗ್ರಾಮ * ಕೃಷಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ರಂಗಭೂಮಿಯಲ್ಲೂ ಮುಂದು ಇಲ್ಲಿಯ ಜನ


ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಎತ್ತ ನೋಡಿದರೂ ಹಸಿರು, ತೆಂಗು, ಅಡಕೆ ಮರಗಳ ಸಾಲುಗಳು. ಕಣ್ವ ನದಿ ತಟದಲ್ಲಿ ಸದ್ದಿಲ್ಲದೆ ಕೃಷಿ ಪ್ರಧಾನ ಗ್ರಾಮವಾಗಿ ಗುರುತಿಸಿಕೊಳ್ಳುತ್ತಿರುವ ಶ್ಯಾನುಭೋಗನಹಳ್ಳಿ.

ಹೌದು..! ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಜಿಲ್ಲಾ ಕೇಂದ್ರದಿಂದ 6 ಕಿಮೀ ಅಂತರದಲ್ಲಿರುವ ಈ ಗ್ರಾಮ, ಮಾಗಡಿ, ಕುಣಿಗಲ್ ಮತ್ತಿತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ. ಉತ್ತಮ ಸಾರಿಗೆ ಸಂಪರ್ಕ ಗ್ರಾಮಕ್ಕಿದ್ದು, ಜಿಲ್ಲೆಯಲ್ಲಿ ವಿಶಿಷ್ಟ ಹೆಗ್ಗುರು ಮೂಡಿಸಿದೆ.


ಕಣ್ವ ಜಲಾಶಯದ ಹಿನ್ನೀರಿನ ದಂಡೆಯಲ್ಲಿ ಬಾನೆತ್ತರದ ತೆಂಗು, ಅಡಕೆ ಮರಗಳ ಸಿರಿಯಲ್ಲಿ ಸದಾ ಹಸಿರನ್ನೇ ಹಾಸು ಹೊದ್ದಿರುವ ಶ್ಯಾನುಭೋಗನಹಳ್ಳಿ ಕೃಷಿ ಪ್ರಧಾನ ಗ್ರಾಮವಾಗಿದ್ದು, ಹೆಚ್ಚಿನ ರೈತರು ರೇಷ್ಮೆ ಅವಲಂಬಿಸಿದರೆ ಕೆಲವರು ತೆಂಗು, ಅಡಕೆ, ಮಾವು ಸೇರಿ ತೋಟಗಾರಿಕಾ ಬೆಳೆ ಬೆಳೆಯುತ್ತಾರೆ. ಕೃಷಿ ಕಾಯಕದ ತೆಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. ಬದಲಾದ ದಿನಗಳಲ್ಲಿ ವ್ಯಾಪಾರ-ವಹಿವಾಟು ದ್ವಿಗುಣಗೊಂಡು ಚಿಕ್ಕ ವಾಣಿಜ್ಯ ಪಟ್ಟಣವಾಗಿ ಗ್ರಾಮ ಬೆಳೆಯುತ್ತಿದ್ದು, ಎಲ್ಲ ವರ್ಗದ ಜನರು ಸೌಹಾರ್ದದ ಬದುಕು ಕಟ್ಟಿಕೊಂಡಿದ್ದಾರೆ.

ಜನ ಹುಡುಕಿಕೊಂಡು ಬಂದಿದ್ದು ಶ್ಯಾನುಭೋಗರಹಳ್ಳಿ!

ಈ ಹಿಂದಿನ ರಾಜ-ಮಹಾರಾಜರ ಕಾಲದಲ್ಲಿ ಭೂಮಿ ಕ್ರಯ, ಕಾಗದ, ಕಂದಾಯ ಪತ್ರಗಳ ನಿರ್ವಹಣೆಯನ್ನು ಶ್ಯಾನುಭೋಗರೇ ನೋಡಿಕೊಳ್ಳುತ್ತಿದ್ದು, ಅವರಲ್ಲಿ ಬಹುತೇಕರು ಈ ಗ್ರಾಮದಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಭೂಮಿ ಮತ್ತಿತರ ವ್ಯವಹಾರಗಳಿಗೆ ಶ್ಯಾನುಭೋಗರನ್ನು ಹುಡುಕಿಕೊಂಡು ಬರುತ್ತಿದ್ದ ಜನ ಶ್ಯಾನುಭೋಗರಹಳ್ಳಿ ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಶ್ಯಾನುಭೋಗನಹಳ್ಳಿಯಾಗಿ ಜನಾನುರಾಗಿಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.

ಹಿನ್ನೀರಿನಲ್ಲಿ ಗ್ರಾಮ

ಈಗಿನ ಶ್ಯಾನುಭೋಗನಹಳ್ಳಿಯು ಈ ಮೊದಲು ಕಣ್ವ ನದಿ ಪಕ್ಕದ ಕಣ್ವ ಕೆರೆ ಹಿನ್ನೀರಿನ ಪ್ರದೇಶದಲ್ಲಿತ್ತು. ಕೆರೆ ತುಂಬಿದಾಗ ನೀರು ಮನೆಗಳಿಗೆ ನುಗ್ಗುತ್ತಿದ್ದ ಕಾರಣ, ಜನ ಸ್ಥಳ ತೊರೆದು ಎತ್ತರದ ಪ್ರದೇಶ(ಈಗಿನ ಸ್ಥಳ)ಕ್ಕೆ ಬಂದು, ಹೊಸ ಗ್ರಾಮ ಕಟ್ಟಿಕೊಂಡರು ಎನ್ನಲಾಗುತ್ತಿದೆ.

ವೀರಯೋಧನ ಪುತ್ಥಳಿ:

ಗ್ರಾಮದ ವೀರಯೋಧ ತಿರುಮಲ್ಲೇಶ್ ಜಮ್ಮು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುವಾಗಿ ಬನ್ನಿಹಾಳ್ ಎಂಬಲ್ಲಿ 2002ರ ನ.17ರಂದು ಉಗ್ರರ ಗುಂಡಿಗೆ ಹುತಾತ್ಮರಾದರು. ಅವರ ಗೌರವಾರ್ಥ ಗ್ರಾಮದ ವೃತ್ತದಲ್ಲಿ ಗ್ರಾಮಸ್ಥರು ಪುತ್ಥಳಿ ನಿರ್ಮಿಸಿದ್ದಾರೆ. ಇದೇ ವೃತ್ತ ಸುತ್ತಲ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ. ಮಣ್ಣಿನ ಗೋಡೆ, ನಾಡಹೆಂಚಿನ ಮನೆಗಳೇ ಕಾಣುತ್ತಿದ್ದ ಶ್ಯಾನುಭೋಗನಹಳ್ಳಿಯಲ್ಲೀಗ ಎಲ್ಲೆಲ್ಲೂ ಕಾಂಕ್ರೀಟ್ ಮನೆಗಳು ತಲೆಯೆತ್ತುತ್ತಿವೆ. ಮುಂದೊಂದು ದಿನ ಶ್ಯಾನುಭೋಗನಹಳ್ಳಿಯು ಹೋಬಳಿ ಕೇಂದ್ರವಾಗಿಯೂ ಮೇಲ್ದರ್ಜೆಗೇರಬಹುದು.

ಪ್ರಮುಖ ದೇವಸ್ಥಾನಗಳು: ಗ್ರಾಮದಲ್ಲಿ ಬಸವಣ್ಣ, ಊರ ಮಹದೇವಮ್ಮ, ರೈತಮ್ಮ, ನರಸಿಂಹಸ್ವಾಮಿ ದೇವಸ್ಥಾನಗಳಿವೆ. ಹಬ್ಬ, ವಿಶೇಷ ದಿನಗಳಲ್ಲಿ ಪೂಜೆ, ಉತ್ಸವಗಳು ಅದ್ದೂರಿಯಾಗಿ ನೆರವೇರುತ್ತವೆ. ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ, ಗ್ರಂಥಾಲಯ, ಪಶು ಆಸ್ಪತ್ರೆ, ಹಾಲಿನ ಡೇರಿಯೂ ಕಾರ್ಯನಿರ್ವಹಿಸುತ್ತಿವೆ.

ರಂಗಭೂಮಿ ನಂಟು:

ಶ್ಯಾನುಭೋಗನಹಳ್ಳಿ ಹಾಗೂ ರಂಗಭೂಮಿಗೆ ನಂಟಿದ್ದು, ದಿ.ಕಾಂತರಾಜ್ ಪಟೇಲ್ ನೂರಾರು ನಾಟಕಗಳಲ್ಲಿ ಅಭಿನಯಿಸಿ, ರಂಗಭೂಮಿ ಕಲೆಯಲ್ಲಿ ಗ್ರಾಮದ ಹೆಸರನ್ನು ಜಿಲ್ಲೆ, ಹೊರ ಜಿಲ್ಲೆಗಳಿಗೂ ಪರಿಚಯಿಸಿದ್ದಾರೆ. ಗ್ರಾಮದ ಈಗಿನ ಹಿರಿಯ, ಕಿರಿಯ ಕಲಾವಿದರು ಸಹ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಂಗಕಲೆಗೆ ಕೊಡುಗೆ ನೀಡುತ್ತಿದ್ದಾರೆ.

ಶ್ಯಾನುಭೋಗನಹಳ್ಳಿ ಕಣ್ವ ನದಿ ದಡದಲ್ಲಿದ್ದು, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮುಂದಿದೆ. ಇಲ್ಲಿನ ರೈತರು ರೇಷ್ಮೆ ಕೃಷಿಯನ್ನೆ ನೆಚ್ಚಿಕೊಂಡಿದ್ದು, ರಾಮನಗರ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 3 ಬಾರಿ ತಾಪಂ ಅಧ್ಯಕ್ಷ ಸ್ಥಾನ ಗ್ರಾಮದವರಿಗೆ ಒಲಿದಿದೆ.
ಜಗದೀಶ್
ತಾಪಂ ಮಾಜಿ ಅಧ್ಯಕ್ಷ, ಶ್ಯಾನುಭೋಗನಹಳ್ಳಿ
ಬಹು ಹಿಂದಿನಿಂದಲೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ರಂಗಭೂಮಿ, ವೈದ್ಯಕೀಯ ಕ್ಷೇತ್ರದಲ್ಲಿ ಶ್ಯಾನುಭೋಗನಹಳ್ಳಿ ಮುಂದಿದೆ. ಗ್ರಾಮದ ವೆಂಕಟಪ್ಪ, ಡಾ.ತಿಮ್ಮಯ್ಯ, ಕಾಂತರಾಜ್ ಪಟೇಲ್, ಡಾ.ವೆಂಕಟಪ್ಪ ಅವರಂಥ ಹಿರಿಯರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಮನಗರದಲ್ಲಿ ಬಡವರ ವೈದ್ಯ ಎಂದೆ ಹೆಸರಾಗಿರುವ ಡಾ.ಎಸ್.ಎಲ್ ತಿಮ್ಮಯ್ಯ ಅವರೂ ಇಲ್ಲಿಯವರೇ. ಹಿರಿಯರ ಸಾಮಾಜಿಕ ಸೇವೆಗಳು ಗ್ರಾಮದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಮಂಜುನಾಥ್
ಗ್ರಾಪಂ ಸದಸ್ಯ, ಶ್ಯಾನುಭೋಗನಹಳ್ಳಿ