ನ್ಯೂಸ್

ನಾಯಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಕಳ್ಕೊಂಡ ಸ್ವಿಗ್ಗಿ ಡೆಲಿವರಿ ಬಾಯ್!

ಹೈದರಾಬಾದ್: ಇದು ಜೀವಭಯದಿಂದ ಜೀವನವೇ ಕೊನೆಯಾದಂಥ ಪ್ರಕರಣ. ನಾಯಿಯೊಂದರಿಂದ ತಪ್ಪಿಸಿಕೊಳ್ಳಲೆಂದು ಮೂರನೇ ಮಹಡಿಯಿಂದ ಜಿಗಿದ ಸ್ವಿಗ್ಗಿ ಡೆಲಿವರಿ ಬಾಯ್ ಪ್ರಾಣ ಕಳೆದುಕೊಂಡಿದ್ದಾನೆ.

ಹೈದರಾಬಾದ್​ನ ಬಂಜಾರಾ ಹಿಲ್ಸ್ ಬಳಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಪ್ರಕರಣ ನಡೆದಿದೆ. ರಿಜ್ವಾನ್​ ಎಂಬಾತ ಸಾವಿಗೀಡಾದ ಸ್ವಿಗ್ಗಿ ಡೆಲಿವರಿ ಬಾಯ್​. ಬುಧವಾರ ರಾತ್ರಿ ಫುಡ್ ಡೆಲಿವರಿ ಕೊಡಲು ಹೋಗಿದ್ದಾಗ ಈ ಅವಘಡ ಸಂಭವಿಸಿತ್ತು.

ಫುಡ್ ಡೆಲಿವರಿಗಾಗಿ ಅಪಾರ್ಟ್​ಮೆಂಟ್​ಗೆ ಹೋಗಿದ್ದ ರಿಜ್ವಾನ್ ಅಲ್ಲಿದ್ದ ಸಾಕುನಾಯಿಯೊಂದರ ಬೊಗಳುವಿಕೆಗೆ ಬೆದರಿ, ಅದರ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಮೃತಪಟ್ಟಿದ್ದಾನೆ.

ಅಪಾರ್ಟ್​ಮೆಂಟ್​ನ ಶೋಭನಾ ಎಂಬವರಿಗೆ ಸೇರಿದ್ದ ಜರ್ಮನ್ ಶೆಫರ್ಡ್ ನಾಯಿ ಈ ದಾಳಿ ನಡೆಸಿದೆ ಎನ್ನಲಾಗಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಗಿದು ಬಿದ್ದ ರಿಜ್ವಾನ್​ಗೆ ಶೋಭನಾ ಮತ್ತು ಅಪಾರ್ಟ್​ಮೆಂಟ್​ನಲ್ಲಿದ್ದ ಇತರರು ಕೂಡಲೇ ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ರಿಜ್ವಾನ್ ಸಹೋದರನ ದೂರಿನ ಮೇರೆಗೆ ಪೊಲೀಸರು ಶೋಭನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.