ಗಾಜಿಯಾಬಾದ್, ಉತ್ತರಪ್ರದೇಶ: ದೇಶಾದ್ಯಂತ ದೀಪಾವಳಿ ಹಬ್ಬದ ಹಿನ್ನೆಲೆ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇದೇ ರೀತಿ ಸ್ವೀಟ್ ಅಂಗಡಿಯೊಂದರ ಮುಂಭಾಗದಲ್ಲಿ ಕೆಲವರು ಪಟಾಕಿ ಹೊಡೆಯಲು ಮುಂದಾದ ವೇಳೆ ಅಂಗಡಿ ಮಾಲೀಕ ಇಲ್ಲಿ ಪಟಾಕಿ ಸಿಡಿಸಬೇಡಿ ಎಂದು ನಿರ್ಬಂಧ ಹೇರಿದ್ದಾರೆ. ಇದಕ್ಕೆ ಕುಪಿತಗೊಂಡ ಯುವಕರ ಗುಂಪೊಂದು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ವರದಿಯಾಗಿದೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಉತ್ತರಪ್ರದೇಶದ ನಿವಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬುಪುರ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಂಗಡಿಯ ಮುಂದೆ ಪಟಾಕಿ ಸಿಡಿಸಬೇಡಿ ಎಂದು ಸ್ಥಳೀಯ ಸ್ವೀಟ್ ಅಂಗಡಿ ಮಾಲೀಕ ಹೇಳಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
ಅಂಗಡಿ ಮುಂದೆ ಪಟಾಕಿ ಸಿಡಿಸುವುದನ್ನು ತಡೆದಿದ್ದಕ್ಕೆ ಆಕ್ರೋಶಗೊಂಡ ಕೆಲವರು ಮಾಲೀಕನನ್ನು ಬೆನ್ನಟ್ಟಿ ಕೋಲು ಮತ್ತು ಇತರೆ ವಸ್ತುಗಳಿಂದ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).